ಅಲ್‌ ಜಝೀರಾ ಪತ್ರಕರ್ತೆಯನ್ನು ಬಲಪ್ರಯೋಗಿಸಿ ಬಂಧನಕ್ಕೊಳಪಡಿಸಿ ಬಿಡುಗಡೆ ಮಾಡಿದ ಇಸ್ರೇಲ್‌

Update: 2021-06-06 12:22 GMT
Photo: Al Jazeera

ಜೆರುಸಲೇಂ: ಅಲ್‌ ಜಝೀರಾ ಅರೆಬಿಕ್‌ ಮಾಧ್ಯಮದ ಪತ್ರಕರ್ತೆ ಜಿವಾರ ಅಲ್ ಬುದೈರಿ ಎಂಬವರನ್ನು ಇಸ್ರೇಲಿ ಪೊಲೀಸರು ಬಂಧಿಸಿದ್ದು, ಹಲವು ಗಂಟೆಗಳ ಕಾಲ ಬಂಧನದಲ್ಲಿದ್ದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು aljazeera.com ವರದಿ ಮಾಡಿದೆ. ಆಕ್ರಮಿತ ಪೂರ್ವ ಜೆರುಸಲೇಂನ ಪಕ್ಕದ ಶೈಖ್‌ ಜರ್ರಾದಲ್ಲಿ ವರದಿ ಮಾಡುತ್ತಿದ್ದ ಸಂದರ್ಭ ಅವರನ್ನು ಬಂಧಿಸಲಾಗಿತ್ತು ಎಂದು ತಿಳಿದು ಬಂದಿದೆ.

ಬಿಡುಗಡೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಬುದೈರಿ, "ಅವರು ಎಲ್ಲಾ ಕಡೆಗಳಿಂದ ಆಕ್ರಮಿಸಿದರು. ಯಾಕೆಂದು ನನಗೆ ತಿಳಿದಿಲ್ಲ. ಅವರು ನನ್ನನ್ನು ಗೋಡೆಗೆ ತಳ್ಳಿದರು. ಬಲವಂತವಾಗಿ, ಕೆಟ್ಟ ರೀತಿಯಲ್ಲಿ ನನನ್ನು ಕಾರಿನೊಳಕ್ಕೆ ತಳ್ಳಿದರು. ಎಲ್ಲಾ ಕಡೆಗಳಿಂದಲೂ ನನಗೆ ಅವರು ಒದೆಯುತ್ತಿದ್ದರು" ಎಂದು ಅವರು ಹೇಳಿಕೆ ನೀಡಿದ್ದಾರೆ.

ಬುದೈರಿ ಅಲ್‌ ಜಝೀರಾದಲ್ಲಿ ‌2000ದಿಂದೂ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರು ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರೆಸ್‌ ಎಂಬ ಬ್ಯಾಡ್ಜ್‌ ಧರಿಸಿದ್ದರು ಹಾಗೂ ಇಸ್ರೇಲಿ ಸರಕಾರದ ಅನುಮತಿಯನ್ನೂ ಪಡೆದಿದ್ದರು ಎಂದು ವರದಿ ತಿಳಿಸಿದೆ. "ಅವರು ನನ್ನನ್ನು ಕ್ರಿಮಿನಲ್‌ ನಂತೆ ನಡೆಸಿಕೊಂಡರು. ಶೈಖ್‌ ಜರ್ರಾಗೆ 15 ದಿನಗಳ ಕಾಲ ಪ್ರವೇಶಿಸಬಾರದು ಎಂಬ ಷರತ್ತಿನ ಮೇರೆಗೆ ನನ್ನನ್ನು ಬಿಡುಗಡೆ ಮಾಡಲಾಗಿದೆ" ಎಂದು ಅವರು ಹೇಳಿಕೆ ನೀಡಿದ್ದಾರೆ.

ಪತ್ರಕರ್ತೆಯ ಬಂಧನದ ಕುರಿತು ಅಲ್‌ ಜಝೀರಾ ಮೀಡಿಯಾ ನೆಟ್ವರ್ಕ್‌ ನ ಮುಖ್ಯ ನಿರ್ದೇಶಕ ಮುಸ್ತಫಾ ಸುವಾಗ್‌ ಖಂಡನೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News