ಕೊರೋನದಿಂದ ಮೃತರ ಸಂಖ್ಯೆ 5 ಲಕ್ಷ. ಬ್ರೆಝಿಲ್‌ನಲ್ಲಿ ಸರಕಾರಿ ವಿರೋಧಿ ಪ್ರತಿಭಟನೆ

Update: 2021-06-21 17:10 GMT
photo : twitter/screengrab

ರಿಯೋಡಿಜನೈರೊ, ಜೂ.21: ಕೊರೋನ ಸೋಂಕಿನ ದ್ವಿತೀಯ ಅಲೆಯಿಂದ ತತ್ತರಿಸಿರುವ ಬ್ರೆಝಿಲ್‌ನಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5 ಲಕ್ಷದ ಗಡಿಯನ್ನು ದಾಟಿರುವಂತೆಯೇ, ಸೋಂಕಿನ ಪಿಡುಗನ್ನು ಸೂಕ್ತವಾಗಿ ನಿರ್ವಹಿಸಲು ಸರಕಾರ ವಿಫಲವಾಗಿದೆ ಎಂದು ಖಂಡಿಸಿ ದೇಶದ ಹಲವೆಡೆ ಸರಕಾರಿ ವಿರೋಧಿ ಪ್ರತಿಭಟನೆ ನಡೆಯುತ್ತಿದೆ ಎಂದು ವರದಿಯಾಗಿದೆ. ಜೂನ್ 19ರಂದು ಹಲವು ನಗರಗಳಲ್ಲಿ ಜನತೆ ರಸ್ತೆಗಿಳಿದು ಸರಕಾರದ ವಿರುದ್ಧ ಘೋಷಣೆ ಮೊಳಗಿಸಿದ್ದಾರೆ. ಕೊರೋನ ಸೋಂಕಿನ ಸಮಸ್ಯೆಯನ್ನು ಕನಿಷ್ಟಗೊಳಿಸಲು ಅಧ್ಯಕ್ಷ ಜೆಯರ್ ಬೊಲ್ಸೊನಾರೊ ಕೈಗೊಂಡ ಕ್ರಮಗಳು ವಿಫಲವಾಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಿಯೊಡಿಜನೈರೊ ಪಟ್ಟಣದಲ್ಲಿ ಬೀದಿಗಿಳಿದ ಪ್ರತಿಭಟನಾಕಾರರು ‘ಹೊರಟುಹೋಗಿ ಬೊಲ್ಸೊನಾರೊ. ಹಸಿವು ಮತ್ತು ನಿರುದ್ಯೋಗದ ಸರಕಾರ ತೊಲಗಲಿ’ ಎಂದು ಘೋಷಣೆ ಕೂಗಿದರು. ‘ 500 ಸಾವಿರ ಸಾವುಗಳು. ಇದು ಅವರ ತಪ್ಪು’, ‘ಜನಾಂಗ ಹತ್ಯೆಕಾರ ಬೊಲ್ಸೊನಾರೊ ತೊಲಗಲಿ’ ಎಂದು ಬರೆದಿರುವ ಫಲಕಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು. ಲಸಿಕೀಕರಣದಲ್ಲಿ ವಿಶ್ವಕ್ಕೇ ಮಾದರಿ ಹಾಕಿಕೊಟ್ಟಿದ್ದ ಬ್ರೆಝಿಲ್‌ಗೆ ಹಿನ್ನಡೆಯಾಗಿದೆ. ಜಾಗತಿಕ ಮಟ್ಟದ ಸಂಸ್ಥೆಗಳು ನಮ್ಮಲ್ಲಿದ್ದರೂ ಈಗ ನಾವು ಅತ್ಯಂತ ವಿಷಾದನೀಯ ಪರಿಸ್ಥಿತಿಯಲ್ಲಿದ್ದೇವೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿ ಇಸಾಬೆಲಾ ಗೌಲ್ಜರ್ ಹೇಳಿದ್ದಾರೆ.

ಬ್ರೆಝಿಲ್‌ನ 26 ರಾಜ್ಯಗಳಲ್ಲಿ ಕನಿಷ್ಟ 22ರಲ್ಲಿ ಮತ್ತು ಫೆಡರಲ್ ರಾಜ್ಯ ಬ್ರೆಸೀಲಿಯಾದಲ್ಲಿ ವಿಪಕ್ಷಗಳ ನೇತೃತ್ವದಲ್ಲಿ ಸರಕಾರಿ ವಿರೋಧಿ ಪ್ರತಿಭಟನೆ ನಡೆದಿದ್ದು ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಬೊಲ್ಸೊನಾರೊರ ಪ್ರಭಾವಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಕೆಲವು ಪ್ರತಿಭಟನಾಕಾರರು ಎಡಪಕ್ಷದ ಮುಖಂಡ, ಮಾಜಿ ಅಧ್ಯಕ್ಷ ಲೂಯಿಝ್ ಇನಾಸಿಯೊ ಲೂಲ ಅವರ ಭಾವಚಿತ್ರವಿರುವ ಶರ್ಟ್ ಧರಿಸಿದ್ದರು. ಸಾಲೋಪೌಲೋದಲ್ಲಿ ನಡೆದ ಪ್ರತಿಭಟನೆಯ ಸಂದರ್ಭ, ಕೊರೋನ ಸೋಂಕಿಗೆ ಬಲಿಯಾದವರಿಗೆ ಶೃದ್ಧಾಂಜಲಿ ಅರ್ಪಿಸಲು ಕೆಂಪು ಬಲೂನುಗಳನ್ನು ಹಾರಿಬಿಡಲಾಯಿತು. ದೇಶದಲ್ಲಿ ಏಕಾಏಕಿ ನಿರ್ಬಂಧ ಮತ್ತು ಲಾಕ್‌ಡೌನ್ ಸಡಿಲಿಸಿರುವುದು ಸೋಂಕು ಉಲ್ಬಣಗೊಳ್ಳಲು ಕಾರಣ ಎಂದು ಬೊಲ್ಸೊನಾರೋ ಅವರ ಬೆಂಬಲಿಗರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಸೋಂಕಿನ ಚಿಕಿತ್ಸೆಗೆ ಪರಿಣಾಮಕಾರಿಯಲ್ಲ ಎಂದು ಘೋಷಿಸಲಾಗಿದ್ದರೂ ಹೈಡ್ರೊಕ್ಸಿಕ್ಲೊರೋಕ್ವಿನ್ ಮಾತ್ರೆಯನ್ನು ಸೋಂಕಿನ ಚಿಕಿತ್ಸೆಗೆ ಬಳಸಲು ಸೂಚಿಸಿದ್ದು ಸೋಂಕು ಉಲ್ಬಣಗೊಳ್ಳಲು ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಲಸಿಕೀಕರಣ ಪ್ರಕ್ರಿಯೆ ಆರಂಭದಲ್ಲಿ ವೇಗ ಪಡೆದಿದ್ದರೂ ಬಳಿಕ ನಿಧಾನಗತಿಗೆ ತಿರುಗಿದ್ದರಿಂದ ದೇಶದ 12%ಕ್ಕಿಂತಲೂ ಕಡಿಮೆ ಜನರಿಗೆ ಮಾತ್ರ ಲಸಿಕೆ ಹಾಕಲಾಗಿದೆ. ಸುಮಾರು 213 ಮಿಲಿಯನ್ ಜನಸಂಖ್ಯೆಯಿರುವ ದೇಶದಲ್ಲಿ ದೈನಂದಿನ 1 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣ, ಸುಮಾರು 20,000 ಸಾವು ಸಂಭವಿಸುತ್ತಿದೆ. ಮುಂಬರುವ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಬೊಲ್ಸೊನಾರೊ ವಿರುದ್ಧ ಜನಾಭಿಪ್ರಾಯ ಮೂಡಿಸುವ ಉದ್ದೇಶದಿಂದ ಎಡಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಇದಕ್ಕೆ ಪ್ರತಿಯಾಗಿ ಕಳೆದ ರಿಯೊಡಿಜನೈರೊದಲ್ಲಿ ಬೆಂಬಲಿಗರ ಬೃಹತ್ ಬೈಕ್ ರ್ಯಾಲಿ ನಡೆಸುವ ಮೂಲಕ ಬೊಲ್ಸೊನಾರೊ ಶಕ್ತಿ ಪ್ರದರ್ಶನ ನಡೆಸಿದ್ದರು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News