ಟೋಕಿಯೋ ಒಲಿಂಪಿಕ್ಸ್ ನಲ್ಲಿ ಹರ್ಷೋದ್ಘಾರ, ಆಲಿಂಗನ, ಮದ್ಯಪಾನಕ್ಕೆ ನಿಷೇಧ

Update: 2021-06-23 15:25 GMT

 ಟೋಕಿಯೊ,ಜೂ.25: ಮುಂದಿನ ತಿಂಗಳು ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್ ವೀಕ್ಷಿಸುವವರಿಗೆ ಮದ್ಯಸೇವನೆಗಾಗಲಿ ಅಥವಾ ಹಷೋದ್ಘಾರಕ್ಕಾಗಲಿ ಅನುಮತಿಯಿಲ್ಲ. ಅಷ್ಟೇಕೆ ಅಟೋಗ್ರಾಫ್ ಪಡೆಯುವುದನ್ನು ಕೂಡಾ ನಿಷೇಧಿಸಲಾಗಿದೆ. ಕೋವಿಡ್19 ಹಾವಳಿಯ ಹಿನ್ನೆಲೆಯಲ್ಲಿ ಒಲಿಂಪಿಕ್ ಗೇಮ್ಸ್ ವೀಕ್ಷಣೆಗೆ ಆಗಮಿಸುವರ ಮೇಲೆ ಹೇರಲಾಗಿರುವ ಕಠಿಣ ನಿಯಮಾವಳಿಗಳನ್ನು ಕ್ರೀಡಾಕೂಟದ ಸಂಘಟಕರು ಬುಧವಾರ ಪ್ರಕಟಿಸಿದ್ದಾರೆ.

 ಒಲಿಂಪಿಕ್ ಕ್ರೀಡಾಕೂಟವನ್ನು ಸುರಕ್ಷಿತವಾಗಿಡಲು ಸಂಭ್ರಮಾಚರಣೆಯನ್ನು ಹದ್ದುಬಸ್ತಿನಲ್ಲಿಡಬೇಕಾಗಿದೆ ಎಂದು 2020ರ ಟೋಕಿಯೋ ಗೇಮ್ಸ್ ನ ಅಧ್ಯಕ್ಷರಾದ ಸೀಕೋ ಹಶಿಮೊಟೋ ತಿಳಿಸಿದ್ದಾರೆ.
  
ಒಲಿಂಪಿಕ್ ಕ್ರೀಡಾಸ್ಪರ್ಧೆಗಳು ನಡೆಯುವ ಸ್ಥಳಗಳಿಗೆ 10 ಸಾವಿರದವರೆಗೆ ಪ್ರೇಕ್ಷಕರಿಗೆ ಅನುಮತಿ ನೀಡಲು ಕ್ರೀಡಾಮುಖ್ಯಸ್ಥರುಗಳು ಸೋಮವಾರ ನಿರ್ಧರಿಸಿದ್ದರು. ಈಗ ನಡೆಯುತ್ತಿರುವ 2020ರ ಯುರೋ ಕಪ್ ನಲ್ಲಿ ಫುಟ್ಬಾಲ್ ಅಭಿಮಾನಿಗಳು ಆಹ್ಲಾದಿಸುತ್ತಿರುವಂತಹ ರೀತಿಯ ಸಡಗರದ ವಾತಾವರಣವನ್ನು ಒಲಿಂಪಿಕ್ ಕ್ರೀಡಾಕೂಟದಲ್ಲಿ ನಿರೀಕ್ಷಿಸುವಂತಿಲ್ಲವೆಂದು ಹಾಶಿಮೋಟೋ ಎಚ್ಚರಿಕೆ ನೀಡಿದ್ದಾರೆ.
 
‘‘ಯುರೋಪ್ ನಲ್ಲಿ ಯುರೋ ಕಪ್ ಕ್ರೀಡಾಂಗಣಗಳಲ್ಲಿ ಸಡಗರ ತುಂಬಿ ತುಳುಕುತ್ತಿದೆ. ಆದರೆ ದುರದೃಷ್ಟವಶಾತ್ ನಮಗೆ ಹಾಗೆ ಮಾಡಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ.
 
ಒಲಿಂಪಿಕ್ ಪಂದ್ಯಕೂಟದ ವೀಕ್ಷಣೆಗಾಗಿ ಕ್ರೀಡಾಂಗಣಗಳಿಗೆೆ ಆಗಮಿಸುವವರು ದೇಹದ ತಾಪಮಾನ ಪರಿಶೀಲನೆ ಹಾಗೂ ಮಾಸ್ಕ್ ಧಾರಣೆ ಸೇರಿದಂತೆ ಹಲವಾರು ಸೋಂಕು ನಿರೋಧಕ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಇವುಗಳನ್ನು ಪಾಲಿಸಲು ವಿಫಲರಾದವರಿಗೆ ಅವರ ಟಿಕೆಟ್ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲವೆಂದು ಅವರು ತಿಳಿಸಿದರು.
  
ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಒಲಿಂಪಿಕ್ ಕೂಟದ ಪ್ರಯುಕ್ತ ಏರ್ಪಡಿಸಲಾಗುವ ಹಲವಾರು ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಅಥ್ಲೀಟ್ ಗಳು ಒಲಿಂಪಿಕ್ ಗ್ರಾಮದಲ್ಲೇ ಉಳಿದುಕೊಳ್ಳಬೇಕಾಗುತ್ತದೆ ಹಾಗೂ ಅವರು ಹೊರಗೆ ಹೋಗುವಂತಿಲ್ಲ ಮತ್ತು ಪ್ರತಿ ದಿನವೂ ಹಾಜರಾಗಿ, ವೈದ್ಯಕೀಯ ಪರೀಕ್ಷೆಗೊಳಪಡಬೇಕಾಗುತ್ತದೆ ಎಂದವರು ಹಾಶಿಮೊಟೋ ತಿಳಿಸಿದ್ದಾರೆ. ಒಲಿಂಪಿಕ್ ಕ್ರೀಡಾಕೂಟಕ್ಕೆ ಇನ್ನು ಕೇವಲ ಒಂದೇ ತಿಂಗಳು ಬಾಕಿಯಿದ್ದು, ಹಲವಾರು ಸವಾಲು ಮುಂದಿವೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News