ಫೈನಲ್ ನಲ್ಲಿ ಭಾರತಕ್ಕೆ ಸೋಲು: ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದ ನ್ಯೂಝಿಲ್ಯಾಂಡ್

Update: 2021-06-23 18:21 GMT
Photo: Twitter.com/ICC

ಸೌತಾಂಪ್ಟನ್, ಜೂ.23: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಝಿಲ್ಯಾಂಡ್ ತಂಡವು 8 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಮುಡಿಗೇರಿಸಿಕೊಂಡಿತು.

ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಕೇವಲ 170 ರನ್ ಗಳಿಗೆ ಆಲೌಟ್ ಆಗುವ ಮೂಲಕ ನ್ಯೂಝಿಲ್ಯಾಂಡ್ ಗೆ 139 ರನ್ ಗಳ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ನ್ಯೂಝಿಲ್ಯಾಂಡ್ 2 ವಿಕೆಟ್ ನಷ್ಟದಲ್ಲಿ 140 ರನ್ ಗಳಿಸಿ ಗೆಲುವು ದಾಖಲಿಸಿತು.

ನ್ಯೂಝಿಲ್ಯಾಂಡ್ ಪರ ನಾಯಕ ಕೇನ್ ವಿಲಿಯಮ್ಸನ್ 52, ರಾಸ್ ಟೇಲರ್ 47 ರನ್ ಬಾರಿಸಿದರು. ಭಾರತದ ಪರ ಆರ್.ಅಶ್ವಿನ್ 2 ವಿಕೆಟ್ ಪಡೆದರು.

ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 217 ರನ್ ಬಾರಿಸಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಝಿಲ್ಯಾಂಡ್ 249 ರನ್ ಗಳಿಗೆ ಆಲೌಟ್ ಆಗಿ, 32 ರನ್ ಗಳ ಮುನ್ನಡೆ ಸಾಧಿಸಿತ್ತು. ಬಳಿಕ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡವು 170 ರನ್ ಗಳಿಗೆ ಆಲೌಟ್ ಆಗಿ ನ್ಯೂಝಿಲ್ಯಾಂಡ್ ಗೆ 139 ರನ್ ಗಳ ಗುರಿ ನೀಡಿತ್ತು.

ನಾಯಕ ವಿರಾಟ್ ಕೊಹ್ಲಿ ಮೂರನೇ ಬಾರಿ ಐಸಿಸಿ ಆಯೋಜಿಸಿರುವ ಟೂರ್ನಿಯಲ್ಲಿ ವೈಫಲ್ಯ ಕಂಡಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಹಾಗೂ 2019ರ ವಿಶ್ವಕಪ್ ನಲ್ಲಿ ಕೊಹ್ಲಿ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದರು. ಕೊಹ್ಲಿ ಈ ವರ್ಷ ಟ್ವೆಂಟಿ-20 ವಿಶ್ವಕ ಪ್ ನಲ್ಲಿ ಆಡಲಿದ್ದು, ಈ ಟೂರ್ನಿಯಲ್ಲಿ ಯಶಸ್ಸು ಕಾಣಬಹುದೇ ಎಂದು ಕಾದುನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News