ಜೀವನ ನಿರ್ವಹಣೆಗೆ ರಸ್ತೆ ಬದಿ ಚಿಪ್ಸ್ ಮಾರುತ್ತಿರುವ ಭಾರತದ ಮೊದಲ ಅಂತರರಾಷ್ಟ್ರೀಯ ಮಟ್ಟದ ಮಹಿಳಾ ಪ್ಯಾರಾ ಶೂಟರ್

Update: 2021-06-24 07:30 GMT
photo: ANI

ಡೆಹ್ರಾಡೂನ್: 34 ರ ವಯಸ್ಸಿನ ಪ್ಯಾರಾ ಶೂಟರ್ ದಿಲ್ರಾಜ್ ಕೌರ್ 2004ರಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದಾಗ ದೇಶದಲ್ಲಿ ಮಹಿಳಾ ಪ್ಯಾರಾ ಶೂಟರ್ ಗಳಿಗೆ ಯಾವುದೇ ಸ್ಥಳವಿರಲಿಲ್ಲ. ಆ ನಂತರದ 15 ವರ್ಷಗಳಲ್ಲಿ ಕೌರ್ ಅವರು ದೇಶದ ಮೊದಲ ಅಂತರ್ ರಾಷ್ಟ್ರೀಯ ಮಟ್ಟದ ಮಹಿಳಾ ಪ್ಯಾರಾ ಶೂಟರ್ ಆಗಿ ಗುರುತಿಸಿಕೊಂಡರು. ಆದರೆ ಅವರ ಸಮಸ್ಯೆಗಳು 2019 ರಲ್ಲಿ ಆರಂಭವಾದವು. ಜೀವನ ನಿರ್ವಹಣೆಗೆ ಇದೀಗ  ತನ್ನ ತಾಯಿಯೊಂದಿಗೆ ರಸ್ತೆ ಬದಿಯಲ್ಲಿ ಚಿಪ್ಸ್ ಮಾರುತ್ತಿದ್ದಾರೆ ಎಂದು timesofindia.com ವರದಿ ಮಾಡಿದೆ.

ಮೊದಲಿಗೆ, ಕೌರ್ ಅವರ ತಂದೆ ನಿಧನರಾದರು. ಕೋವಿಡ್ -19 ಸಾಂಕ್ರಾಮಿಕ ರೋಗ ಅಪ್ಪಳಿಸಿತು. ನಂತರ ಅವರ ಸಹೋದರ ನಿಧನರಾದರು. ಈ ವರ್ಷ 20 ನೇ ಉತ್ತರಾಖಂಡ ರಾಜ್ಯ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಸೇರಿದಂತೆ ರಾಷ್ಟ್ರಮಟ್ಟದಲ್ಲಿ 30 ಪದಕಗಳನ್ನು ಗೆದ್ದಿರುವ ಕೌರ್ ಅವರು  ಈಗ ಜೀವನ ಸಾಗಿಸಲು ಡೆಹ್ರಾಡೂನ್‌ನಲ್ಲಿರುವ ತನ್ನ ತಾಯಿಯೊಂದಿಗೆ ರಸ್ತೆಬದಿಯಲ್ಲಿ ಚಿಪ್ಸ್ ಗಳನ್ನು ಮಾರಾಟ ಮಾಡುತ್ತಿದ್ದಾರೆ.

“ಆರಂಭದಲ್ಲಿ ನಾವು ಗೋವಿಂದಗಡದ ನಮ್ಮ ಮನೆಯ ಬಳಿ ಚಿಪ್ಸ್ ಗಳನ್ನು ಮಾರಾಟ ಮಾಡುತ್ತಿದ್ದೆವು. ಆದರೆ ಕೇಂದ್ರ ಸ್ಥಾನದಲ್ಲಿರುವ ಗಾಂಧಿ ಪಾರ್ಕ್ ಬಳಿ ಚಿಪ್ಸ್  ಮಾರಾಟ ಮಾಡಲು ಆರಂಭಿಸಲು ನನ್ನ ತಾಯಿ ಸಲಹೆ ನೀಡಿದರು ಎಂದು ಕೌರ್ Times of India ಗೆ ತಿಳಿಸಿದರು.

ಕೌರ್ ಒಂದು ಹಂತದಲ್ಲಿ ದೇಶದ ಅತ್ಯುತ್ತಮ ಪ್ಯಾರಾ ಏರ್ ಪಿಸ್ತೂಲ್ ಶೂಟರ್ ಎಂದು ಪರಿಗಣಿಸಲ್ಪಟ್ಟಿದ್ದರು. 2015 ರಲ್ಲಿ ನಡೆದ ಅಂತರ್ ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ದಿಲ್ಲಿಯಲ್ಲಿ ಈ ವರ್ಷ ನಡೆದ ಅಂತರ್ ರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ ವಿಶ್ವಕಪ್ ಸೇರಿದಂತೆ ಹಲವಾರು ಆಯ್ಕೆ ಸಮಿತಿಗಳು ಹಾಗೂ  ಶೂಟಿಂಗ್ ಸ್ಪರ್ಧೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

“ನನ್ನ ತಂದೆ 2019 ರಲ್ಲಿ ನಿಧನರಾದರು. ಅವರು ಡಯಾಲಿಸಿಸ್‌ನಲ್ಲಿದ್ದರು ಮತ್ತು ಅದು ದುಬಾರಿಯಾಯಿತು. ನನ್ನ ಸಹೋದರ ಈ ವರ್ಷ ಫೆಬ್ರವರಿಯಲ್ಲಿ ನಿಧನರಾದರು. ಆತ ಕಟ್ಟಡದಿಂದ ಬಿದ್ದು ತಲೆಗೆ ಹಾಗೂ  ಮೆದುಳಿಗೆ ತೀವ್ರ ಗಾಯಗಳಾಗಿದ್ದವು. ನಾವು ಅವನನ್ನು ಉಳಿಸಲು ಶತಪ್ರಯತ್ನಪಟ್ಟಿದ್ದೆವು. ನಾವು ಆತನ ಚಿಕಿತ್ಸೆಗೆ 1 ಕೋಟಿ ರೂ.ಗೂ ಅಧಿಕ ಮೊತ್ತ ಖರ್ಚು ಮಾಡಿದ್ದೆವು.  ಆದರೆ ಆತ ಕೂಡ ತೀರಿಕೊಂಡ. ಈಗ, ನಾವು ಸಾಲದಲ್ಲಿ ಮುಳುಗಿದ್ದೇವೆ. ಏನೂ ಉಳಿದಿಲ್ಲ, ”ಎಂದು ಕೌರ್  ನೋವನ್ನು ತೋಡಿಕೊಂಡರು.

“ಉತ್ತರಾಖಂಡದ ನನ್ನ ಪರಿಚಿತ ಕ್ರೀಡಾಪಟುಗಳು, ಸಂಘ-ಸಂಸ್ಥೆಗಳು ಅಥವಾ ರಾಜಕಾರಣಿಗಳು ಯಾರೂ  ನನ್ನ ನೆರವಿಗೆ  ಮುಂದೆ ಬಂದಿಲ್ಲ. ನನ್ನ ಶೂಟಿಂಗ್ ವೃತ್ತಿಜೀವನದಲ್ಲಿ ನಾನು ರಾಜ್ಯ ಸರಕಾರದ ಉದ್ಯೋಗವನ್ನು ಪಡೆಯಲು ಸಾಕಷ್ಟು ಸಾಧಿಸಿದ್ದೇನೆ. ರಾಜಸ್ಥಾನ ಹಾಗೂ  ಹರಿಯಾಣದಲ್ಲಿನ ಸರಕಾರ ತನ್ನ ಕ್ರೀಡಾಪಟುಗಳಿಗೆ ಗ್ರೇಡ್ ಬಿ ನೌಕರಿಯನ್ನು ಒದಗಿಸುತ್ತದೆ. ನಮ್ಮ ಸರಕಾರ ಹಾಗೆ ಮಾಡುತ್ತಿಲ್ಲ, ”ಎಂದು ಕೌರ್  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News