×
Ad

ಭಾರತ ಬಯೊಟೆಕ್ ನ ಕೋವ್ಯಾಕ್ಸಿನ್ ಲಸಿಕೆ ಖರೀದಿ ಒಪ್ಪಂದ ಕುರಿತು ತನಿಖೆ ಆರಂಭಿಸಿದ ಬ್ರೆಜಿಲ್

Update: 2021-06-24 23:17 IST

ಬ್ರೆಸಿಲಿಯಾ, ಜೂ.24: ಭಾರತದ ಭಾರತ ಬಯೊಟೆಕ್ ಅಭಿವೃದ್ಧಿಗೊಳಿಸಿರುವ ಕೋವ್ಯಾಕ್ಸಿನ್ ಲಸಿಕೆಯ ಎರಡು ಕೋಟಿ ಡೋಸ್ಗಳನ್ನು ಖರೀದಿಸಲು ದೇಶದ ಆರೋಗ್ಯ ಸಚಿವಾಲಯವು ಮಾಡಿಕೊಂಡಿರುವ ಒಪ್ಪಂದದ ಕುರಿತು ಬ್ರೆಜಿಲ್ ನ  ಒಕ್ಕೂಟ ಸರಕಾರದ ಪ್ರಾಸಿಕ್ಯೂಷನ್ ಕಚೇರಿಯು ತನಿಖೆಯನ್ನಾರಂಭಿಸಿದೆ.

ನಿಯಂತ್ರಣ ಪ್ರಾಧಿಕಾರಿಗಳ ಅನುಮತಿ ದೊರಕದ ಕೋವ್ಯಾಕ್ಸಿನ್ಗಾಗಿ ಫೆಬ್ರವರಿಯಲ್ಲಿ ಮಾಡಿಕೊಳ್ಳಲಾದ ಖರೀದಿ ಒಪ್ಪಂದದಲ್ಲಿನ ತುಲನಾತ್ಮಕವಾಗಿ ಹೆಚ್ಚಿನ ದರ ಪ್ರಾಸಿಕೂಟರ್ ಕಚೇರಿಯ ಗಮನವನ್ನು ಸೆಳೆದಿದೆ. ಬ್ರೆಜಿಲ್ನಲ್ಲಿ ಭಾರತ ಬಯೊಟೆಕ್ನ ಏಜೆಂಟ್ ಆಗಿರುವ ಪ್ರಿಸಿಸಾ ಮೆಡಿಕಾಮೆಂಟಾಸ್ಗೆ ಆರೋಗ್ಯ ಸಚಿವಾಲಯವು 320 ಮಿಲಿಯನ್ ಡಾಲರ್(ಸುಮಾರು 2,375 ಕೋ.ರೂ)ಗಳನ್ನು ಪಾವತಿಸಬೇಕಿದ್ದು,ತಲಾ ಡೋಸ್ಗೆ 15 ಡಾ.ದರವನ್ನು ನಿಗದಿಗೊಳಿಸಲಾಗಿದೆ ಎಂದು ಪ್ರಾಸಿಕ್ಯೂಟರ್ ಜನರಲ್ ಕಚೇರಿಯು ತಿಳಿಸಿದೆ.
  
ಇದು ಆರೋಗ್ಯ ಸಚಿವಾಲಯವು ನಿಯಂತ್ರಣ ಪ್ರಾಧಿಕಾರದ ಅನುಮತಿಯೊಂದಿಗೆ ಅಮೆರಿಕದ ಫೈಝರ್ ಕಂಪನಿಯಿಂದ ಕೋವಿಡ್ ಲಸಿಕೆಯ ಖರೀದಿಗಾಗಿ ಪಾವತಿಸಿದ್ದ ಮೊತ್ತಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ವರ್ಷ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೊ ಅವರು ಲಸಿಕೆ ಪೂರೈಕೆಯ ಫೈಝರ್ನ ಕೊಡುಗೆಯನ್ನು ಕಡೆಗಣಿಸಿದ್ದರು ಮತ್ತು ಅದರ ಪರಿಣಾಮಕಾರಿತ್ವದ ಕುರಿತು ಪದೇ ಪದೇ ಶಂಕೆಗಳನ್ನು ವ್ಯಕ್ತಪಡಿಸಿದ್ದರು ಎಂದು ವರದಿಗಳು ತಿಳಿಸಿವೆ. 

ಒಕ್ಕೂಟ ಸರಕಾರದೊಂದಿಗೆ ಪ್ರಿಸಿಸಾದ ಹಿಂದಿನ ಒಪ್ಪಂದಗಳಲ್ಲಿಯ ಅಕ್ರಮಗಳ ಆರೋಪಗಳನ್ನು ಸಹ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಕಡೆಗಣಿಸಿದ್ದರು ಎಂದು ಫೆಡರಲ್ ಪ್ರಾಸಿಕ್ಯೂಟರ್ ಲೂಸಿಯಾನಾ ಲೌರಿರೊ ಆಲಿವಿರಾ ಅವರು ಜೂ.16ರಂದು ಹೇಳಿಕೆಯಲ್ಲಿ ತಿಳಿಸಿದ್ದರು.
 
ಕೋವ್ಯಾಕ್ಸಿನ್ ಲಸಿಕೆಗಾಗಿ ಒಪ್ಪಂದವು ಬ್ರೆಜಿಲ್ ನ ಸೆನೆಟ್ ಸಮಿತಿಯ ಗಮನವನ್ನೂ ಸೆಳೆದಿದೆ. ಹೀಗಾಗಿ ಒಪ್ಪಂದದ ಕುರಿತು ಅದು ಆಳವಾದ ತನಿಖೆಯನ್ನು ನಡೆಸಲಿದೆ ಎಂದು ಸೆನೆಟರ್ ರೆನಾನ್ ಕ್ಯಾಲಿರಸ್ ತಿಳಿಸಿದರು. ಪ್ರಿಸಿಸಾದ ಪಾಲುದಾರ ಫ್ರಾನ್ಸಿಸ್ಕೋ ಮ್ಯಾಕ್ಸಿಮಿಯಾನೊ ಅವರು ಮಂಗಳವಾರ ಸಮಿತಿಯೆದುರು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ತಾನು ಭಾರತದಿಂದ ಮರಳಿದ ಬಳಿಕ ಕ್ವಾರಂಟೈನ್ನಲ್ಲಿದ್ದೇನೆ ಎಂಬ ಕಾರಣ ನೀಡಿ ಅವರು ವಿಚಾರಣೆಗೆ ಗೈರಾಗಿದ್ದರು.

ಭಾರತ ಬಯೊಟೆಕ್ನೊಂದಿಗೆ ಒಪ್ಪಂದಕ್ಕೆ ಬೊಲ್ಸನಾರೊ ಸರಕಾರವು ಅತಿಯಾದ ಒತ್ತಡ ಹೇರಿತ್ತು ಎನ್ನುವುದನ್ನು ತೋರಿಸುವ ದಾಖಲೆಗಳು ಸಮಿತಿಯ ಬಳಿಯಿವೆ ಎಂದು ವರದಿಗಳು ತಿಳಿಸಿವೆ. ತನ್ಮಧ್ಯೆ ಭಾರತ ಬಯೊಟೆಕ್ನ ಲಸಿಕೆಯನ್ನು ಖರೀದಿಸುವಂತೆ ಬೊಲ್ಸನಾರೊ ಅವರ ನಿಕಟವರ್ತಿಯೋರ್ವರ ಸಹಾಯಕ ಅಲೆಕ್ಸ್ ಲಿಯಾಲ್ ಮರಿನೊ ಅವರು ತನ್ನ ಮೇಲೆ ಒತ್ತಡ ಹೇರಿದ್ದರು ಎಂದು ಲಾಜಿಸ್ಟಿಕ್ ಇಲಾಖೆಯ ಅಧಿಕಾರಿ ಲೂಯಿಸ್ ರಿಕಾರ್ಡೊ ಮಿರಾಂಡಾ ಅವರು ಬುಧವಾರ ಸೆನೆಟ್ ಸಮಿತಿಯ ಮುಂದೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News