ಟೆಸ್ಟ್ ಚಾಂಪಿಯನ್‌ಶಿಪ್ ಸೋಲಿನ ವಿಶ್ಲೇಷಣೆ: ಮಂಜ್ರೇಕರ್ ಹೇಳಿದ್ದೇನು?
ಮುಂಬೈ, ಜೂ.25: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೋಲಿನ ಬೆನ್ನಲ್ಲೇ ಭಾರತ ತಂಡದ ಸೋಲಿನ ಬಗ್ಗೆ ಹಲವು ಬಗೆಯ ವಿಶ್ಲೇಷಣೆಗಳು ನಡೆಯುತ್ತಿವೆ. ಮಾಜಿ ಕ್ರಿಕೆಟರ್ ಸಂಜಯ್ ಮಂಜ್ರೇಕರ್ ಪ್ರಕಾರ ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಆಡಲು ಅವಕಾಶ ಮಾಡಿಕೊಟ್ಟಿದ್ದು, ಭಾರತಕ್ಕೆ ಮುಳುವಾಯಿತು.
ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧ 8 ವಿಕೆಟ್‌ಗಳ ಸೋಲು ಅನುಭವಿಸಿತ್ತು. ಜಡೇಜಾ ಈ ಪಂದ್ಯದಲ್ಲಿ ಒಂದು ವಿಕೆಟ್ ಕಿತ್ತಿದ್ದರು ಹಾಗೂ ಎರಡು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 15 ಮತ್ತು 16 ರನ್ ಮಾತ್ರ ಗಳಿಸಿದ್ದರು. ಎರಡೂ ಇನಿಂಗ್ಸ್‌ಗಳಲ್ಲಿ ಭಾರತ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಗಿತ್ತು.
32 ವರ್ಷದ ಆಲ್‌ರೌಂಡರ್ ಜಡೇಜಾ ಅವರನ್ನು ಬ್ಯಾಟಿಂಗ್ ಶಕ್ತಿಗಾಗಿ ಅಂತಿಮ ಹನ್ನೊಂದರ ಪಟ್ಟಿಯಲ್ಲಿ ಸೇರಿಸಿದ್ದು, ಒಂದು ಬಗೆಯ ಜೂಜು. ಇದು ಫಲ ನೀಡಲಿಲ್ಲ ಎಂದು ಮಂಜ್ರೇಕರ್ ವಿಶ್ಲೇಷಿಸಿದ್ದಾರೆ. ಜಡೇಜಾ ಕಳೆದ ಮೂರು ವರ್ಷಗಳಿಂದ ಉತ್ತಮ ರನ್ ಸರಾಸರಿ ಹೊಂದಿದ್ದು, ಬೌಲಿಂಗ್ ಕೂಡಾ ಸುಧಾರಿಸುತ್ತಿದೆ. ಆದರೆ ವೇಗದ ಬೌಲರ್‌ಗಳಿಗೆ ನೆರವು ನೀಡುವ ವಾತಾವರಣದಲ್ಲಿ ಜಡೇಜಾ ಅವರನ್ನು ಸೇರಿಸಿಕೊಂಡಿದ್ದು ಅಚ್ಚರಿಯ ವಿಷಯ ಎಂದು ಮಂಜ್ರೇಕರ್ ಹೇಳುತ್ತಾರೆ. "ವೇಗದ ಬೌಲರ್‌ಗಳಿಗೆ ಸ್ವರ್ಗ ತೆರೆಯುತ್ತಿದ್ದರೂ ಭಾರತ ಮಾತ್ರ ಮೊದಲು ಘೋಷಿಸಿದ ಅಂತಿಮ 11ರ ಪಟ್ಟಿಗೇ ಅಂಟಿಕೊಂಡಿತು" ಎಂದು ವಿಶ್ಲೇಷಿಸಿದ್ದಾರೆ.
"ಇಬ್ಬರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡುವುದು ಚರ್ಚಾಸ್ಪದ ಆಯ್ಕೆ. ಮಳೆಯ ಸ್ಥಿತಿ ಇದ್ದು, ಟಾಸ್ ಒಂದು ದಿನ ವಿಳಂಬವಾಗಿತ್ತು. ಇಂಥ ಸಂದರ್ಭದಲ್ಲಿ ಒಬ್ಬ ಆಟಗಾರನನ್ನು ಬ್ಯಾಟಿಂಗ್‌ಗಾಗಿ ಆಯ್ಕೆ ಮಾಡಿದರು. ಅವರು ಜಡೇಜಾ. ಅವರ ಆಯ್ಕೆಗೆ ಅವರ ಎಡಗೈ ಸ್ಪಿನ್ ಕಾರಣವಾಗಿರುವ ಸಾಧ್ಯತೆ ಇಲ್ಲ. ಬ್ಯಾಟಿಂಗ್‌ಗಾಗಿ ಅವರನ್ನು ಆಯ್ಕೆ ಮಾಡಲಾಯಿತು. ಇಂಥದ್ದಕ್ಕೆ ನಾನು ಯಾವಾಗಲೂ ವಿರೋಧ" ಎಂದು ESPNCricinfo ಜತೆ ಮಾತನಾಡಿದ ಅವರು ಅಭಿಪ್ರಾಯಪಟ್ಟರು.