ಅಪ್ಘಾನ್ ನಿಂದ ಅಮೆರಿಕ ಪಡೆಗಳ ವಾಪಸಾತಿ ಪ್ರಕ್ರಿಯೆ ಆರಂಭ: ಬೈಡೆನ್ ಭೇಟಿಯಾದ ಅಪಘಾನ್ ಅಧ್ಯಕ್ಷ ಘನಿ

Update: 2021-06-25 16:46 GMT
Ashraf Ghani(twitter)  /  joe biden PTI

ವಾಷಿಂಗ್ಟನ್, ಜೂ.25: ಅಪಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರ ವಿರುದ್ಧದ ಸಮರಕ್ಕೆ ಸರಕಾರಿ ಪಡೆಗಳಿಗೆ ನೆರವಾಗಲು ನಿಯೋಜಿಸಲಾಗಿದ್ದ ಅಮೆರಿಕದ ಸೇನಾಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಶುಕ್ರವಾರ ಆರಂಭವಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಸೇನಾಪಡೆ ವಾಪಸಾದರೂ, ಅಪಘಾನಿಸ್ತಾನಕ್ಕೆ ಅಮೆರಿಕದ ನೆರವು ಮುಂದುವರಿಯುವುದನ್ನು ಖಾತರಿಪಡಿಸುವ ಉದ್ದೇಶದಿಂದ ಶುಕ್ರವಾರ ಅಪಘಾನ್ ಅಧ್ಯಕ್ಷ ಅಶ್ರಫ್ ಘನಿ ಮತ್ತು ಅವರ ಮಾಜಿ ರಾಜಕೀಯ ಪ್ರತಿಸ್ಪರ್ಧಿ ಅಬ್ದುಲ್ಲಾ ಅಬ್ದುಲ್ಲಾ ವಾಷಿಂಗ್ಟನ್ನಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಪಘಾನಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು, ಕೊರೋನ ಸೋಂಕು ಉಲ್ಬಣಗೊಂಡಿರುವುದು ಮುಂತಾದ ಸಮಸ್ಯೆಯ ಮಧ್ಯೆ, ಈಗ ಅಮೆರಿಕ ಸೇನಾ ಪಡೆ ವಾಪಸಾತಿಯಿಂದ ತಾಲಿಬಾನ್ ಪಡೆಗಳ ಆಕ್ರಮಣ ತೀವ್ರಗೊಳ್ಳುವ ಸಾಧ್ಯತೆಯಿದೆ. 

ಈ ಹಿನ್ನೆಲೆಯಲ್ಲಿ ಬೈಡೆನ್- ಘನಿ ಮಾತುಕತೆ ನಡೆದಿದೆ ಎಂದು ಮೂಲಗಳು ಹೇಳಿವೆ. ಮನೋಬಲ ಕುಸಿದಿರುವಾಗ ಮತ್ತು ಪರಿಸ್ಥಿತಿ ಹದಗೆಡುತ್ತಿರುವಾಗ ಆತ್ಮಸ್ಥೈರ್ಯ ವೃದ್ಧಿಸುವ ಕ್ರಮ ಕೈಗೊಳ್ಳಬೇಕು. ಅಮೆರಿಕ ಸರಕಾರ ಇದನ್ನೇ ಮಾಡುತ್ತಿದೆ. ಘನಿಯವರನ್ನು ಅಮೆರಿಕಕ್ಕೆ ಆಹ್ವಾನಿಸುವ ಮೂಲಕ ಜಗತ್ತಿಗೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ ಎಂದು ಅಪಘಾನಿಸ್ತಾನದಲ್ಲಿ ಅಮೆರಿಕದ ಮಾಜಿ ರಾಯಭಾರಿಯಾಗಿದ್ದ ರೊನಾಲ್ಡ್ ನ್ಯೂಮನ್ ಹೇಳಿದ್ದಾರೆ. 

ಅಶ್ರಫ್ ಘನಿ ಪದತ್ಯಾಗ ಮಾಡಿ ತಾತ್ಕಾಲಿಕ ಸರಕಾರಕ್ಕೆ ಅನುವು ಮಾಡಿಕೊಡಬೇಕು ಎಂದು ತಾಲಿಬಾನ್ನೊಂದಿಗಿನ ಶಾಂತಿ ಮಾತುಕತೆ ಸಂದರ್ಭ ಅಮೆರಿಕ ಒಪ್ಪಂದ ಸೂತ್ರ ಮುಂದಿಟ್ಟಿತ್ತು. ಆದರೆ ಈ ಮಾತುಕತೆ ವಿಫಲವಾಗಿತ್ತು. ಅಧ್ಯಕ್ಷರಾದ ಬಳಿಕ ಬೈಡೆನ್ ಅಪಘಾನ್ ಅಧ್ಯಕ್ಷ ಘನಿ ಮತ್ತು ರಾಷ್ಟ್ರೀಯ ಸಮನ್ವಯ ಸಮಿತಿಯ ಅಧ್ಯಕ್ಷ ಅಬ್ದುಲ್ಲಾ ರೊಂದಿಗೆ ನಡೆಸಿದ ಪ್ರಥಮ ಸಭೆಯಲ್ಲಿ ಅಪಘಾನ್ ಜನತೆ ಮತ್ತು ಭದ್ರತಾ ಪಡೆಗಳ ಕುರಿತು ಅಮೆರಿಕ ಹೊಂದಿರುವ ಬದ್ಧತೆಗೆ ಪ್ರಾಶಸ್ತ್ಯ ನೀಡಲಾಗಿದೆ . 

ಒಗ್ಗೂಡಿ ಕಾರ್ಯನಿರ್ವಹಿಸುವಂತೆ ಘನಿ ಮತ್ತು ಅಬ್ದುಲ್ಲಾರಿಗೆ ಸಲಹೆ ನೀಡಿದ ಬೈಡೆನ್, ಶಾಂತಿ ಮಾತುಕತೆಗೆ ಅಮೆರಿಕದ ಬೆಂಬಲವನ್ನು ಪುನರುಚ್ಚರಿಸಿದರು ಎಂದು ಶ್ವೇತಭವನದ ಉಪಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರೆ ಹೇಳಿದ್ದಾರೆ.

ಮುಂದಿನ ವರ್ಷ ಅಪಘಾನಿಸ್ತಾನದ ಭದ್ರತಾ ವೆಚ್ಚಕ್ಕೆ 3.3 ಬಿಲಿಯನ್ ಡಾಲರ್ ನೆರವು ನೀಡುವ ಪ್ರಸ್ತಾವನೆಯನ್ನು ಅನುಮೋದಿಸುವಂತೆ ಬಿಡೆನ್ ಅಮೆರಿಕ ಸಂಸತ್ತನ್ನು ಆಗ್ರಹಿಸಿದ್ದಾರೆ. ಜತೆಗೆ, ಕೊರೋನ ಸೋಂಕಿನ ವಿರುದ್ಧದ ಕಾರ್ಯಾಚರಣೆಗೆ ನೆರವಾಗಲು 3 ಮಿಲಿಯನ್ ಡೋಸ್ ಲಸಿಕೆಯನ್ನು ಅಪಘಾನಿಸ್ತಾನಕ್ಕೆ ರವಾನಿಸುವುದಾಗಿ ಘೋಷಿಸಿದ್ದಾರೆ.

ಸೇನೆ ವಾಪಸಾತಿ ಪ್ರಕ್ರಿಯೆ ಸ್ಥಗಿತವಿಲ್ಲ 

ಅಪಘಾನಿಸ್ತಾನದಿಂದ ಅಮೆರಿಕ ಸೇನಾಪಡೆಯನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದಿರಲು ಅಧ್ಯಕ್ಷ ಬೈಡೆನ್ ದೃಢನಿರ್ಧಾರ ಮಾಡಲಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಜುಲೈ ಅಂತ್ಯಕ್ಕೆ ಅಥವಾ ಆಗಸ್ಟ್ ಮೊದಲ ವಾರ ಸೇನಾಪಡೆ ವಾಪಸಾತಿ ಪ್ರಕ್ರಿಯೆ ಅಂತ್ಯಗೊಳ್ಳುವ ನಿರೀಕ್ಷೆಯಿದೆ. ಆ ಬಳಿಕ ಮತ್ತೆ ಅಪಘಾನಿಸ್ತಾನದಲ್ಲಿ ಸೇನಾಪಡೆ ನಿಯೋಜಿಸುವ ಯಾವುದೇ ಕೋರಿಕೆಗೂ ಬೈಡೆನ್ ಒಪ್ಪುವ ಸಾಧ್ಯತೆಯಿಲ್ಲ. ಮುಂದಿನ ದಿನಗಳಲ್ಲಿ ಗುಪ್ತಚರ ಇಲಾಖೆಯ ಕಾರ್ಯನಿರ್ವಹಣೆ, ಯುದ್ಧವಿಮಾನಗಳ ನಿರ್ವಹಣೆ ವಿಷಯದಲ್ಲಿ ಸಲಹೆಗಷ್ಟೇ ಅಮೆರಿಕದ ನೆರವು ಸೀಮಿತವಾಗಿರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News