ಮಿಶನರಿ ವಸತಿ ಶಾಲೆಗಳಲ್ಲಿ ಮಕ್ಕಳ ಸಾವಿಗಾಗಿ ಪೋಪ್ ಕ್ಷಮೆಯಾಚಿಸಲಿ: ಕೆನಡ ಪ್ರಧಾನಿ ಜಸ್ಟಿನ್ ಟ್ರುಡೋ ಆಗ್ರಹ

Update: 2021-06-26 17:58 GMT

ಒಟ್ಟಾವ,ಜೂ.26: ಕೆನಡದಲ್ಲಿ 19ನೇ ಶತಮಾನದಿಂದ 1970ನೇ ಇಸವಿಯವರಿಗೆ ಮೂಲನಿವಾಸಿಗಳ ಮಕ್ಕಳಿಗಾಗಿ ಕ್ರಿಶ್ಚಿಯನ್ ಚರ್ಚ್ ಗಳು ನಡೆಸುತ್ತಿದ್ದ ವಸತಿ ಶಾಲೆಯ ಆವರಣದಲ್ಲಿ ನೂರಾರು ಅಜ್ಞಾತ ಗೋರಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕ್ರೈಸ್ತ ಧರ್ಮಗುರು ಪೋಪ್ ಜಾನ್ ಪಾಲ್ ಅವರು ಕೆನಡಕ್ಕೆ ಆಗಮಿಸಿ ಕ್ಷಮೆ ಕೇಳಬೇಕೆಂದು ಅಮೆರಿಕದ ಪ್ರಧಾನಿ ಜಸ್ಟೀನ್ ಟ್ರುಡೋ ಶುಕ್ರವಾರ ಆಗ್ರಹಿಸಿದ್ದಾರೆ.

ಮೂಲನಿವಾಸಿಗಳ ಮಕ್ಕಳನ್ನು ಇಂತಹ ಶಾಲೆಗಳಿಗೆ ಹಾಜರಾಗುವಂತೆ ಬಲವಂತಪಡಿಸುವ 19 ಮತ್ತು 20ನೇ ಶತಮಾನದಲ್ಲಿ ಕೆನಡದ ಸರಕಾರಗಳ ನೀತಿಗಳ ಬಗ್ಗೆ ಕೆನಡಿಯನ್ ಪ್ರಜೆಗಳು ಭಯವಿಹ್ವಲರಾಗಿದ್ದಾರೆ ಹಾಗೂ ಲಜ್ಜೆಗೀಡಾಗಿದ್ದಾರೆಂದು ಅವರು ಹೇಳಿದ್ದಾರೆ.

 ‘‘ಈ ಬಗ್ಗೆ ನಾನು ಪೋಪ್ ಜೊತೆ ಖುದ್ದಾಗಿ ಮಾತನಾಡಿರುವೆ. ಕೆನಡಕ್ಕೆ ಆಗಮಿಸಿ ಮೂಲನಿವಾಸಿಗಳ ಮುಂದೆ ಕ್ಷಮೆಯಾಚಿಸುವುದು ಮುಖ್ಯವೆಂದು ಅವರಿಗೆ ಮನವರಿಕೆ ಮಾಡಲು ನಾನು ಯತ್ನಿಸಿದ್ದೇನೆ’’ ಎಂದು ಟ್ರುಡೋ ತಿಳಿಸಿದರು.

ಈ ವಾರ ಮಕ್ಕಳ ಗೋರಿಗಳು ಪತ್ತೆಯಾಗಿರುವ ವಸತಿ ಶಾಲೆಯು ಸಾಸ್ಕಾಚೆವಾನ್ ಪ್ರಾಂತದಲ್ಲಿ 1899ರಿಂದ 1997ರವರೆಗೆ ಕಾರ್ಯನಿರ್ವಹಿಸುತ್ತಿತ್ತು. ಕಳೆದ  ತಿಂಗಳು ಬ್ರಿಟಿಶ್ ಕೊಲಂಬಿಯಾದಲ್ಲಿರುವ ಇನ್ನೊಂದು ಶಿಥಿಲಗೊಂಡ ಮಿಶಿನರಿ ಶಾಲೆಯ ಆವರಣದಲ್ಲಿಯೂ 215 ಮಕ್ಕಳ ಕಳೇಬರಗಳ ಅವಶೇಷ ಪತ್ತೆಯಾಗಿದ್ದವು.
 
19ನೇ ಶತಮಾನದಿಂದ ಹಿಡಿದು 1970ರ ದಶಕದವರೆಗೆ 1.50 ಲಕ್ಷಕ್ಕೂ ಅಧಿಕ ಮೂಲನಿವಾಸಿಗಳನ್ನು ಅವರ ಹೆತ್ತವರಿಂದ ಬೇರ್ಪಡಿಸಿ, ಬಲವಂತವಾಗಿ ಸರಕಾರಿ ನೆರವಿನ ಕ್ರೈಸ್ತ ವಸತಿ ಶಾಲೆಗಳಲ್ಲಿ ಸೇರ್ಪಡೆಗೊಳಿಸಲಾಗಿತ್ತು. ಕೆನಡ ಸಮಾಜದ ಮುಖ್ಯವಾಹಿನಿಗಳಲ್ಲಿ ಮೂಲನಿವಾಸಿಗಳನ್ನು ತರುವ ಅಭಿಯಾನ ಇದಾಗಿದೆಯೆಂದು ಆಗ ಕೆನಡಿಯನ್ ಸರಕಾರಗಳು ಪ್ರತಿಪಾದಿಸಿದ್ದವು.
  
ಕೆನಡದ ಮೂಲನಿವಾಸಿಗಳ ಮಕ್ಕಳು ತಮ್ಮ ಮಾತೃಭಾಷೆಗಳಲ್ಲಿ ಮಾತನಾಡುವುದನ್ನು ಹಾಗೂ ತಮ್ಮ ಸಂಪ್ರದಾಯಗಳನ್ನು ಅನುಸರಿಸುವುದನ್ನು ನಿಷೇಧಿಸಲಾಗಿತ್ತು. ಈ ಮಕ್ಕಳಲ್ಲಿ ಹಲವಾರು ಮಂದಿ ದೈಹಿಕ ಹಾಗೂ ಲೈಂಗಿಕ ದೌರ್ಜನ್ಯಗಳಿಗೆ ತುತ್ತಾಗಿದ್ದರೆಂದು 2008ರಲ್ಲಿ ಇಂತಹ ಶಾಲೆಗಳ ಬಗ್ಗೆ ತನಿಖೆಗಾಗಿ ನೇಮಕಗೊಂಡಿದ್ದ ಕೆನಡಾದ ಸತ್ಯಶೋಧನಾ ಸಮಿತಿ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News