×
Ad

ಈಜು ಸ್ಪರ್ಧೆಯಲ್ಲಿ ಇತಿಹಾಸ ಸೃಷ್ಟಿಸಿದ ಸಾಜನ್ ಪ್ರಕಾಶ್

Update: 2021-06-27 10:25 IST

ಹೊಸದಿಲ್ಲಿ: ಭಾರತದ ಸಾಜನ್ ಪ್ರಕಾಶ್ ಅವರು ರೋಮ್‌ನಲ್ಲಿ ನಡೆದ ಒಲಿಂಪಿಕ್ ಅರ್ಹತಾ ಸುತ್ತಿನ 200 ಮೀಟರ್ ಬಟರ್‌ ಫ್ಲೈ ಈಜು ಸ್ಪರ್ಧೆಯಲ್ಲಿ 1:56:38 ಸೆಕೆಂಡ್‌ಗಳಲ್ಲಿ ಗುರಿಮುಟ್ಟುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು.

ಒಲಿಂಪಿಕ್ಸ್‌ ಗೆ ಎ ಸ್ಟ್ಯಾಂಡರ್ಡ್ ಸಮಯದೊಂದಿಗೆ ನೇರ ಅರ್ಹತೆ ಪಡೆದ ಮೊಟ್ಟಮೊದಲ ಭಾರತೀಯ ಈಜುಗಾರ ಎಂಬ ಖ್ಯಾತಿಗೆ ಅವರು ಪಾತ್ರರಾದರು.

ಸೆಟ್ಟೆ ಕೊಲ್ಲಿ ಟ್ರೋಫಿಯ ಗೇಮ್ಸ್‌ನಲ್ಲಿ ಎ ಸ್ಟ್ಯಾಂಡರ್ಡ್ ಸಮಯವನ್ನು 1.56.48 ಸೆಕೆಂಡ್‌ಗೆ ನಿಗದಿಪಡಿಸಲಾಗಿತ್ತು. ಆದರೆ 27 ವರ್ಷದ ಭಾರತೀಯ ಈಜುಗಾರ 0.10 ಸೆಕೆಂಡ್ ಮೊದಲೇ ಗುರಿ ತಲುಪಿ ಎರಡನೇ ಅತಿವೇಗದ ಈಜುಗಾರ ಎನಿಸಿಕೊಂಡರು. ಎಫ್‌ಐಎನ್‌ಎ ಮಾನ್ಯತೆ ಪಡೆದ ಒಲಿಂಪಿಕ್ಸ್ ಅರ್ಹತಾ ಟೂರ್ನಿ ಇದಾಗಿತ್ತು.

"ಭಾರತದ ಈಜು ಇತಿಹಾಸದಲ್ಲಿ ಐತಿಹಾಸಿಕ ಕ್ಷಣ !!! ಸಾಜನ್ ಪ್ರಕಾಶ್ ಅವರು 1.56.38 ಸೆಕೆಂಡ್‌ನಲ್ಲಿ ಗುರಿ ತಲುಪಿ ಒಲಿಂಪಿಕ್ ಅರ್ಹತಾ ಸಮಯವನ್ನು ಬೇಧಿಸಿದ್ದಾರೆ. ಅಭಿನಂದನೆಗಳು" ಎಂದು ಭಾರತೀಯ ಈಜು ಒಕ್ಕೂಟ ಟ್ವೀಟ್ ಮಾಡಿದೆ.

ಪ್ರಕಾಶ್ ಕಳೆದ ವಾರ ನಡೆದ ಬೆಲ್‌ ಗ್ರೇಡ್ ಟ್ರೋಫಿ ಸ್ಪರ್ಧೆಯಲ್ಲಿ ನಿರ್ಮಿಸಿದ್ದ 1.56.96 ಸೆಕೆಂಡ್‌ನ ರಾಷ್ಟ್ರೀಯ ದಾಖಲೆಯನ್ನೂ ಅಳಿಸಿ ಹಾಕಿದ್ದಾರೆ. ಇದು ಪ್ರಕಾಶ್ ಅವರ ಎರಡನೇ ಒಲಿಂಪಿಕ್ಸ್ ಸ್ಪರ್ಧೆಯಾಗಿದ್ದು, 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಾನ ಪಟೇಲ್ ಅವರ ಜತೆ ಸ್ಪರ್ಧಿಸಲಿದ್ದಾರೆ. ಪಟೇಲ್ ಅವರ ವಿವಿ ಮಟ್ಟದ ಸಾಧನೆಯನ್ನು ಪರಿಗಣಿಸಿ ಈಜು ಒಕ್ಕೂಟ ಅವರನ್ನು ಒಲಿಂಪಿಕ್ಸ್‌ಗೆ ಆಯ್ಕೆ ಮಾಡಿತ್ತು.

ಪ್ರಕಾಶ್ ನೇರ ಅರ್ಹತೆ ಪಡೆದಿರುವುದರಿಂದ 100 ಮೀಟರ್ ಪುರುಷರ ಬ್ಯಾಕ್‌ ಸ್ಟ್ರೋಕ್ಸ್‌ನಲ್ಲಿ 0.05 ಸೆಕೆಂಡ್‌ಗಳ ಅಂತರದಿಂದ ಅರ್ಹತೆ ತಪ್ಪಿಸಿಕೊಂಡಿದ್ದ ಶ್ರೀಹರಿ ನಟರಾಜ್, ಈಗಾಗಲೇ ವಿವಿ ಮಟ್ಟದ ಸಾಧನೆಗಾಗಿ ಒಲಿಂಪಿಕ್ಸ್‌ಗೆ ನಾಮಕರಣಗೊಂಡಿದ್ದರೂ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News