ಕೆನಡದಲ್ಲಿ ದಾಖಲೆಯ 49.5 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಕನಿಷ್ಠ 134 ಸಾವು

Update: 2021-06-30 14:58 GMT
ಸಾಂದರ್ಭಿಕ ಚಿತ್ರ

ವ್ಯಾಂಕೋವರ್ (ಕೆನಡ), ಜೂ. 30: ಕೆನಡದ ವ್ಯಾಂಕೋವರ್ ಪ್ರದೇಶದಲ್ಲಿ ಸಂಭವಿಸಿರುವ ಹಲವಾರು ಸಾವುಗಳಿಗೂ ಈ ಪ್ರದೇಶದಲ್ಲಿ ವ್ಯಾಪಿಸಿರುವ ಉಷ್ಣ ಅಲೆಗೂ ಸಂಬಂಧವಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಕೆನಡ ಈಗ ತನ್ನ ಇತಿಹಾಸದಲ್ಲೇ ಗರಿಷ್ಠ ಉಷ್ಣತೆಗೆ ಸಾಕ್ಷಿಯಾಗುತ್ತಿದೆ ಹಾಗೂ ಉಷ್ಣ ಅಲೆಯು ಅಮೆರಿಕದ ವಾಯುವ್ಯ ಪೆಸಿಫಿಕ್ ತೀರಕ್ಕೂ ಹಬ್ಬಿದೆ.

ವ್ಯಾಂಕೋವರ್ ಪ್ರದೇಶದಲ್ಲಿ ಶುಕ್ರವಾರದಿಂದೀಚೆಗೆ ಕನಿಷ್ಠ 134 ಜನರು ದಿಢೀರ್ ಮೃತಪಟ್ಟಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಶುಕ್ರವಾರದಿಂದೀಚೆಗೆ 65ಕ್ಕೂ ಅಧಿಕ ದಿಢೀರ್ ಸಾವಿನ ಘಟನೆಗಳಿಗೆ ಸ್ಪಂದಿಸಿರುವುದಾಗಿ ವ್ಯಾಂಕೋವರ್ ಪೊಲೀಸ್ ಇಲಾಖೆ ತಿಳಿಸಿದೆ. ಈ ಪೈಕಿ ಹೆಚ್ಚಿನ ಸಾವುಗಳು ಅತಿ ಉಷ್ಣತೆಯಿಂದಾಗಿ ಸಂಭವಿಸಿವೆ ಎಂದು ಅದು ಹೇಳಿದೆ.

ಕೆನಡದಲ್ಲಿ ಸತತ ಮೂರನೇ ದಿನವಾದ ಮಂಗಳವಾರ ವ್ಯಾಂಕೋವರ್‌ನಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಬ್ರಿಟಿಶ್ ಕೊಲಂಬಿಯದ ಲೈಟನ್ ಎಂಬಲ್ಲಿ ಸಾರ್ವಕಾಲಿಕ ಗರಿಷ್ಠ ಉಷ್ಣತೆ 49.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ದೇಶದ ಹವಾಮಾನ ಸಂಸ್ಥೆ ‘ಎನ್ವಿರಾನ್‌ಮೆಂಟ್ ಕೆನಡ’ ತಿಳಿಸಿದೆ.

‘‘ವ್ಯಾಂಕೋವರ್ ಇಂಥ ಉಷ್ಣತೆಯನ್ನು ಎಂದೂ ಅನುಭವಿಸಿಲ್ಲ. ದುರದೃಷ್ಟವಶಾತ್ ಹತ್ತಾರು ಜನರು ಇದರಿಂದಾಗಿ ಸಾಯುತ್ತಿದ್ದಾರೆ’’ ಎಂದು ಪೊಲೀಸ್ ಸಾರ್ಜಂಟ್ ಸ್ಟೀವ್ ಆ್ಯಡಿಸನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News