ಟ್ವೆಂಟಿ -20 ಟ್ರೋಫಿ ಫೈನಲ್: ಕೊನೆಯ ಓವರ್ ನಲ್ಲಿ 36 ರನ್ ಗಳಿಸಿದ ಜಾನ್ ಗ್ಲಾಸ್, ಬ್ಯಾಲಿಮೆನಾಗೆ ರೋಚಕ ಜಯ
ಹೊಸದಿಲ್ಲಿ: ಎಲ್ ವಿಎಸ್ ಟ್ವೆಂಟಿ -20 ಟ್ರೋಫಿ ಫೈನಲ್‌ನಲ್ಲಿ ಉತ್ತರ ಐರಿಶ್ ಕ್ರಿಕೆಟ್ ಕ್ಲಬ್ ಕ್ರೆಗಾಘ್ ವಿರುದ್ಧ ಬ್ಯಾಲಿಮೆನಾ ತಂಡಕ್ಕೆ ಗೆಲ್ಲಲು ಅಂತಿಮ ಓವರ್ ನಲ್ಲಿ 35 ರನ್ ಗಳಿಸಬೇಕಾದ ಕಠಿಣ ಸವಾಲು ಎದುರಾಗಿತ್ತು. ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದ್ದ ಉತ್ತರ ಐರಿಶ್ ಕ್ರಿಕೆಟ್ ಕ್ಲಬ್ ಕ್ರೆಗಾಘ್ ಗೆ ಶಾಕ್ ನೀಡಿದ ಬ್ಯಾಲಿಮೆನಾ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಅಸಾಮಾನ್ಯ ಗೆಲುವು ದಾಖಲಿಸಿತು.
ಗುರುವಾರ ನಡೆದ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಆರು ಸಿಕ್ಸರ್ ಗಳನ್ನು ಸಿಡಿಸಿದ ಬ್ಯಾಲಿಮೆನಾ ಉಸ್ತುವಾರಿ ನಾಯಕ ಜಾನ್ ಗ್ಲಾಸ್ ಎಲ್ಲ ಅಡೆತಡೆ ಮೆಟ್ಟಿನಿಂತು ತನ್ನ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ತವರು ಮೈದಾನದಲ್ಲಿ ಆಡಿದ ಕ್ರೆಗಾಘ್ ತಂಡ ಮೊದಲು ಬ್ಯಾಟಿಂಗ್ ಮಾಡಿ ಸ್ಪರ್ಧಾತ್ಮಕ 147 ರನ್ ಗಳಿಸಿತ್ತು. ಗೆಲ್ಲಲು 148 ರನ್ ಗುರಿ ಬೆನ್ನಟ್ಟಿದ ಬ್ಯಾಲಿಮೆನಾ ತಂಡ 113 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಉರುಳಿಸಿದ ಕ್ರೆಗಾಘ್ ಗೆಲುವಿನ ವಿಶ್ವಾಸದಲ್ಲಿತ್ತು.
ಆಗ 51 ರನ್ ಗಳಿಸಿ ಕ್ರೀಸ್ ನಲ್ಲಿದ್ದ ಗ್ಲಾಸ್, ಕೊನೆಯ ಓವರ್ ನ ಪ್ರತಿ ಎಸೆತವನ್ನು ಸಿಕ್ಸರ್ ಗೆ ಅಟ್ಟುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಔಟಾಗದೆ 87 ರನ್ ಗಳಿಸಿದ ಗ್ಲಾಸ್ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದೇ ಪಂದ್ಯದಲ್ಲಿ ಗ್ಲಾಸ್ ಅವರ ಅಣ್ಣ ಸ್ಯಾಮ್ ಮೊದಲ ಇನ್ನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ಪೂರ್ಣಗೊಳಿಸಿರುವುದು ಅವರ ಸಂಭ್ರಮವನ್ನು ಹೆಚ್ಚಿಸಿತು.