ʼಜಗತ್ತಿನ ಮಾಧ್ಯಮ ಸಮೂಹಕ್ಕೆ ದೊಡ್ಡ ನಷ್ಟʼ: ದಾನಿಶ್‌ ಸಿದ್ದೀಕಿ ಸಾವಿಗೆ ಅಮೆರಿಕದ ಬೈಡನ್‌ ಆಡಳಿತದಿಂದ ಸಂತಾಪ

Update: 2021-07-17 10:52 GMT

ವಾಷಿಂಗ್ಟನ್: ಅಫ್ಗಾನಿಸ್ತಾನದ ಸೇನಾ ಪಡೆಗಳು ತಾಲಿಬಾನ್ ಉಗ್ರರೊಂದಿಗೆ ಕಾದಾಟ ನಡೆಸುತ್ತಿದ್ದ ಸಂದರ್ಭ ವರದಿಗಾರಿಕೆಗೆ ತೆರಳಿದ್ದ ರಾಯ್ಟರ್ಸ್ ಸುದ್ದಿ ಸಂಸ್ಥೆಯ ಪುಲಿಟ್ಜರ್ ಪ್ರಶಸ್ತಿ ವಿಜೇತ ಭಾರತೀಯ ಪತ್ರಕರ್ತ ದಾನಿಶ್ ಸಿದ್ದೀಕಿ  ಅವರ ಹತ್ಯೆಯನ್ನು ಅಮೆರಿಕಾದ ಬೈಡನ್ ಆಡಳಿತ ಹಾಗೂ ಸಂಸದರು ಖಂಡಿಸಿದ್ದಾರೆ ಹಾಗೂ ತಮ್ಮ ಸಂತಾಪ ಸೂಚಿಸಿದ್ದಾರೆ.

ಘಟನೆ ನಡೆದ ಸಂದರ್ಭ ದಾನಿಶ್ ಅವರು ಪಾಕಿಸ್ತಾನ ಗಡಿ ಸಮೀಪದ ಅಫ್ಗಾನ್ ನಗರವಾದ ಬೋಲ್ಡಾಕ್ ಎಂಬಲ್ಲಿದ್ದರು.

"ಅಫ್ಗಾನಿಸ್ತಾನದಲ್ಲಿ ವರದಿಗಾರಿಕೆ ಮಾಡುತ್ತಿದ್ದ ವೇಳೆ  ರಾಯ್ಟರ್ಸ್ ಪತ್ರಕರ್ತ ದಾನಿಶ್ ಸಿದ್ದೀಕಿ ಅವರ ಹತ್ಯೆಯ ಕುರಿತು ತಿಳಿದು ಬಹಳ ದುಃಖವಾಯಿತು" ಎಂದು ಅಮೆರಿಕಾದ ಡಿಪಾರ್ಟ್‍ಮೆಂಟ್ ಆಫ್ ಸ್ಟೇಟ್‍ನ ಮುಖ್ಯ ಉಪವಕ್ತಾರೆ ಜಲೀನಾ ಪೋರ್ಟರ್ ಹೇಳಿದ್ದಾರೆ.

"ರೋಹಿಂಗ್ಯ ನಿರಾಶ್ರಿತರು ಎದುರಿಸುತ್ತಿರುವ ಬಿಕ್ಕಟ್ಟಿನ ಕುರಿತು ಅವರು ಮಾಡಿದ್ದ ಅದ್ಭುತ ವರದಿಗಾರಿಕೆಗೆ ಅವರಿಗೆ 2018ರಲ್ಲಿ ಪುಲಿಟ್ಜರ್ ಪ್ರಶಸ್ತಿ ಬಂದಿತ್ತು, ಅವರ ಸಾವು ರಾಯ್ಟರ್ಸ್ ಗೆ ಮಾತ್ರವಲ್ಲ ಬದಲು ಇಡೀ ಜಗತ್ತಿನ ಮಾಧ್ಯಮ ಸಮೂಹಕ್ಕೆ ಒಂದು ದೊಡ್ಡ ನಷ್ಟ" ಎಂದು ಅವರು ಹೇಳಿದ್ದಾರೆ.

ದಾನಿಶ್ ಅವರ ಹತ್ಯೆಯನ್ನು ʼದುರಂತಮಯ ಸಾವು' ಎಂದು ಅಮೆರಿಕಾದ ಸೆನೇಟ್ ವಿದೇಶ ಸಂಬಂಧಗಳ ಸಮಿತಿಯ ಸದಸ್ಯ ಜಿಮ್ ರಿಸ್ಚ್ ಹೇಳಿದ್ದಾರಲ್ಲದೆ ಕರ್ತವ್ಯದಲ್ಲಿರುವ ವೇಳೆ ಯಾವುದೇ ಪತ್ರಕರ್ತನ ಹತ್ಯೆಯಾಗಬಾರದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News