"ಲಸಿಕೆ ದೊರೆಯುವ ಮುನ್ನವೇ ಮಕ್ಕಳು ಮುನ್ನೆಚ್ಚರಿಕೆಗಳೊಂದಿಗೆ ತರಗತಿಗೆ ಹಾಜರಾಗಬಹುದು"

Update: 2021-07-17 14:36 GMT
Photo: Twitter

ಹೊಸದಿಲ್ಲಿ: ಮಕ್ಕಳಿಗಾಗಿ ಕೋವಿಡ್-19 ಲಸಿಕೆ ಲಭ್ಯವಾಗುವುದಕ್ಕಿಂತ ಮುನ್ನ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸುವುದಕ್ಕೆ ಕೋವಿಡ್ ಮೂರನೇ ಅಲೆಯ ಭೀತಿಯಿಂದಾಗಿ ಭಾರತದಲ್ಲಿ ಭಾರೀ ಹಿಂಜರಿಕೆಯಿದೆ. ಆದರೆ ಕೋವಿಡ್ ಲಸಿಕೆಯಿಲ್ಲದೇ ಇದ್ದರೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಮಕ್ಕಳು ಮತ್ತೆ ಭೌತಿಕ ತರಗತಿಗಳಿಗೆ ಹಾಜರಾಗಬಹುದಾಗಿದೆ ಎಂದು ಅಮೆರಿಕಾದ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಪ್ರೊಫೆಸರ್ ಆಫ್ ಮೆಡಿಸಿನ್ ಡಾ ಮೋನಿಕಾ ಗಾಂಧಿ ಹೇಳುತ್ತಾರೆ.

ಸಾಂಕ್ರಾಮಿಕ ರೋಗಗಳ ತಜ್ಞೆಯಾಗಿರುವ ಅವರ ಪ್ರಕಾರ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಶಾಲೆಗಳನ್ನು ಆರಂಭಿಸಬಹುದು ಹಾಗೂ ತರಗತಿಗಳಲ್ಲಿ ಸಾಕಷ್ಟು ವಾತಾನುಕೂಲವಿರಬೇಕು ಎಂದು ಹೇಳುವ ಅವರು ದೀರ್ಘಕಾಲ ಶಾಲೆಯಿಂದ ದೂರವುಳಿಯುವುದರಿಂದ ಅದು ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದೆಂದು ಎಚ್ಚರಿಸುತ್ತಾರೆ. "ಭಾರತದ ಶಾಲೆಗಳಲ್ಲಿ ಬಹಳಷ್ಟು ಕಿಟಕಿ ಬಾಗಿಲುಗಳಿವೆ ಹಾಗೂ ಮಕ್ಕಳು ಲಸಿಕೆ ಪಡೆಯುವ ಮುನ್ನವೇ ಶಾಲೆಗಳಿಗೆ ಹೋಗಬಹುದು" ಎಂದು ಅವರು ಹೇಳುತ್ತಾರೆ.

"ಮಕ್ಕಳು ಮಾನಸಿಕ ಆರೋಗ್ಯ ಸಮಸ್ಯೆಗಳು, ಆಹಾರ ಸೇವನೆ ಸಂಬಂಧಿತ ಹಾಗೂ ಕಲಿಕಾ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಇತ್ತೀಚೆಗೆ ಬಿಡುಗಡೆಗೊಳಿಸಲಾಗಿರುವ ಯುನಿಸೆಫ್ ವರದಿಯಲ್ಲಿ ಹೇಳಲಾಗಿದೆ" ಎಂದು ಅವರು ವಿವರಿಸಿದ್ದಾರೆ.

ಆದರೆ ಲಸಿಕೆಗಳು ಅನುಮೋದನೆಗೊಂಡು ಲಭ್ಯಗೊಂಡ ನಂತರ ಮಕ್ಕಳಿಗೆ ಲಸಿಕೆ ನೀಡುವುದೂ ಅಗತ್ಯ ಎಂದು ಅವರು ಹೇಳಿದರು.

ಭಾರತದಲ್ಲಿ ಲಸಿಕೆ ಅಭಿಯಾನ ನಿರೀಕ್ಷಿತ ವೇಗ ಪಡೆಯದೇ ಇರುವುದಕ್ಕೆ ಖೇದವನ್ನೂ ಅವರು ವ್ಯಕ್ತಪಡಿಸಿದರಲ್ಲದೆ ದೇಶದಲ್ಲಿನ  ಲಸಿಕೆ ಕೊರತೆಗೆ ಬಿಗ್ ಫಾರ್ಮಾ ಮತ್ತು ಶ್ರೀಮಂತ ರಾಷ್ಟ್ರಗಳನ್ನು ಅವರು ದೂರಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News