ತಾಲಿಬಾನ್ ಉಗ್ರರ ವಿರುದ್ಧ ಅಮೆರಿಕ ಪಡೆಗಳಿಂದ ವಾಯು ದಾಳಿ: ಪೆಂಟಗನ್

Update: 2021-07-23 15:15 GMT

ವಾಶಿಂಗ್ಟನ್, ಜು. 23: ಅಮೆರಿಕವು ಇತ್ತೀಚೆಗೆ ತಾಲಿಬಾನ್ ವಿರುದ್ಧ ವಾಯು ದಾಳಿ ನಡೆಸಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಗುರುವಾರ ತಿಳಿಸಿದೆ. ತಾಲಿಬಾನ್ ಉಗ್ರರು ನಡೆಸಿದ ಆಕ್ರಮಣವನ್ನು ಹಿಮ್ಮೆಟ್ಟಿಸುವಲ್ಲಿ ಅಫ್ಘಾನ್ ಸೈನಿಕರಿಗೆ ಅಮೆರಿಕ ವಾಯುಪಡೆ ನೆರವು ನೀಡಿತು ಎಂದು ಅದು ಹೇಳಿದೆ. ಹಿಂಸಾಗ್ರಸ್ತ ಅಫ್ಘಾನಿಸ್ತಾನದಿಂದ ವಿದೇಶಿ ಪಡೆಗಳ ಸಂಪೂರ್ಣ ವಾಪಸಾತಿ ನಡೆಯುತ್ತಿರುವಂತೆಯೇ ಈ ದಾಳಿ ನಡೆದಿದೆ.

‘‘ಕಳೆದ ಹಲವು ದಿನಗಳಲ್ಲಿ ಅಫ್ಘಾನಿಸ್ತಾನದ ಸರಕಾರಿ ಪಡೆಗಳಿಗೆ ಬೆಂಬಲವಾಗಿ ನಾವು ವಾಯು ದಾಳಿಗಳನ್ನು ನಡೆಸಿದ್ದೇವೆ’’ ಎಂದು ಪೆಂಟಗನ್ ವಕ್ತಾರ ಜಾನ್ ಕರ್ಬಿ ಹೇಳಿದ್ದಾರೆ. ‘‘ಅಫ್ಘಾನಿಸ್ತಾನದ ಸರಕಾರಿ ಪಡೆಗಳಿಗೆ ಬೆಂಬಲವಾಗಿ ವಾಯು ದಾಳಿಗಳನ್ನು ನಡೆಸುವುದನ್ನು ನಾವು ಮುಂದುವರಿಸುತ್ತೇವೆ’’ ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಾ ಅವರು ಹೇಳಿದರು. ಅಮೆರಿಕ ಸೇನಾ ಸೆಂಟ್ರಲ್ ಕಮಾಂಡ್ ನ ಜನರಲ್ ಕೆನೆತ್ ಮೆಕೆಂಝೀ ಈ ವಾಯುದಾಳಿಗೆ ಅನುಮೋದನೆ ನೀಡಿದ್ದಾರೆ ಎಂದರು.
ವಾಯು ದಾಳಿಗಳಿಗೆ ಸಂಬಂಧಿಸಿದ ವಿವರಗಳನ್ನು ನನಗೆ ನೀಡಲಾಗದು ಎಂದು ಹೇಳಿದ ಅವರು, ಇನ್ನು ಮುಂದೆಯೂ ಅಫ್ಘಾನ್ ಭದ್ರತಾ ಪಡೆಗಳಿಗೆ ಮತ್ತು ಅಫ್ಘಾನ್ ಸರಕಾರಕ್ಕೆ ನೆರವು ನೀಡುವುದಕ್ಕೆ ಅಮೆರಿಕ ಬದ್ಧವಾಗಿದೆ ಎಂಬುದಾಗಿ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡೆ ಆಸ್ಟಿನ್ ಬುಧವಾರ ನೀಡಿದ ಹೇಳಿಕೆಯನ್ನು ಪುನರುಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News