ಅಧ್ಯಕ್ಷರಾಗಿ ಕ್ಸಿ ಜಿನ್ಪಿಂಗ್ ಟಿಬೆಟ್ ಗೆ ಮೊದಲ ಭೇಟಿ

Update: 2021-07-23 15:18 GMT
photo : twitter/@zhang_heqing

ಬೀಜಿಂಗ್, ಜು. 23: ಚೀನಾದ ರಾಜಕೀಯ ಸೂಕ್ಷ್ಮ ವಲಯವಾಗಿರುವ ಟಿಬೆಟ್ಗೆ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅಪರೂಪದ ಭೇಟಿ ನೀಡಿದ್ದಾರೆ ಎಂದು ಸರಕಾರಿ ಮಾಧ್ಯಮ ಶುಕ್ರವಾರ ವರದಿ ಮಾಡಿದೆ. ಮೂರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ದೇಶದ ಅಧ್ಯಕ್ಷರೊಬ್ಬರು ಟಿಬೆಟ್ ಗೆ ನೀಡಿರುವ ಮೊದಲ ಭೇಟಿ ಇದಾಗಿದೆ. ಟಿಬೆಟ್ ಶತಮಾನಗಳಿಂದ ಸ್ವಾತಂತ್ರ್ಯ ಮತ್ತು ಚೀನಾದ ನಿಯಂತ್ರಣಕ್ಕೆ ಪರ್ಯಾಯವಾಗಿ ಒಳಪಡುತ್ತಾ ಬಂದಿದೆ. ಹಿಂದೆ ಅಭಿವೃದ್ಧಿಯಿಂದ ವಂಚಿತವಾಗಿದ್ದ ಟಿಬೆಟ್ ಗೆ 1951ರಲ್ಲಿ ಮೋಕ್ಷ ನೀಡಿ, ಆ ವಲಯಕ್ಕೆ ಮೂಲಸೌಕರ್ಯ ಮತ್ತು ಶಿಕ್ಷಣ ತಂದಿರುವುದಾಗಿ ಚೀನಾ ಹೇಳಿಕೊಳ್ಳುತ್ತಿದೆ.

ಆದರೆ, ಚೀನಾ ಸರಕಾರವು ಧಾರ್ಮಿಕ ದೌರ್ಜನ್ಯವನ್ನು ನಡೆಸುತ್ತಿದೆ ಹಾಗೂ ತಮ್ಮ ಸಂಸ್ಕತಿಯನ್ನು ನಾಶಪಡಿಸುತ್ತಿದೆ ಎಂಬುದಾಗಿ ಹೆಚ್ಚಿನ ದೇಶಭ್ರಷ್ಟ ಟಿಬೆಟಿಯನ್ನರು ಆರೋಪಿಸುತ್ತಾರೆ.

ಚೀನಾ ನಡೆಸುತ್ತಿರುವ ವೇಗದ ಅಭಿವೃದ್ಧಿಯಿಂದ ತಮ್ಮ ಪ್ರಾಚೀನ ಸಂಸ್ಕೃತಿ ನಾಶವಾಗುತ್ತಿದೆ ಎಂಬುದಾಗಿ ಆರೋಪಿಸಿ 2008ರಲ್ಲಿ ಟಿಬೆಟ್ನಲ್ಲಿ ಭೀಕರ ಹಿಂಸಾಚಾರ ನಡೆದಿತ್ತು. ಜಿನ್ಪಿಂಗ್ ವಿಮಾನದಿಂದ ಕೆಳಗಿಳಿಯುವಾಗ ಅವರಿಗೆ ಕೆಂಪು ಹಾಸಿನ ಸ್ವಾಗತ ನೀಡಿರುವುದನ್ನು ತೋರಿಸುವ ವೀಡಿಯೊ ತುಣುಕೊಂದನ್ನು ಸರಕಾರಿ ಸುದ್ದಿವಾಹಿನಿ ಸಿಸಿಟಿವಿ ಶುಕ್ರವಾರ ಬಿಡುಗಡೆ ಮಾಡಿದೆ. ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಚೀನಾದ ಧ್ವಜಗಳನ್ನು ಹಿಡಿದಿದ್ದ ಗುಂಪೊಂದರತ್ತ ಜಿನ್ಪಿಂಗ್ ಕೈಬೀಸುವುದು ವೀಡಿಯೊದಲ್ಲಿ ಕಾಣಿಸುತ್ತದೆ. ಕಡೆಯದಾಗಿ ಈ ಹಿಂದೆ ಟಿಬೆಟ್ ಗೆ ಭೇಟಿ ನೀಡಿರುವ ಅಧ್ಯಕ್ಷ ಜಿಯಾಂಗ್ ಝೆಮಿನ್. ಅವರು 1990ರಲ್ಲಿ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News