ಟರ್ಕಿ: 45 ವಲಸಿಗರಿದ್ದ ದೋಣಿ ಮುಳುಗಡೆ

Update: 2021-07-23 17:07 GMT
photo : twitter/@bianet_eng

ಇಸ್ತಾನ್ಬುಲ್, ಜು.23: ವಲಸಿಗರನ್ನು ಸಾಗಿಸುತ್ತಿದ್ದ ದೋಣಿಯೊಂದು ಟರ್ಕಿ ಬಳಿ ಸಾಗರದಲ್ಲಿ ಮುಳುಗಿದ್ದು ದೋಣಿಯಲ್ಲಿದ್ದ 45 ಮಂದಿಯ ಪತ್ತೆಗೆ ತಟರಕ್ಷಣಾ ಪಡೆ ಕಾರ್ಯಾಚರಣೆ ಆರಂಭಿಸಿದೆ ಎಂದು ಟರ್ಕಿಯ ರಕ್ಷಣಾ ಇಲಾಖೆ ಶುಕ್ರವಾರ ಹೇಳಿದೆ. ಬೇಸಿಗೆ ಪ್ರವಾಸಿಧಾಮವಾದ ಕಾಸ್ನಿಂದ ಸುಮಾರು 260 ಕಿ.ಮೀ ದೂರದಲ್ಲಿ ದೋಣಿ ಮುಳುಗಿರುವ ಬಗ್ಗೆ ಗುರುವಾರ ಮಾಹಿತಿ ಬಂದ ಬಳಿಕ ದೋಣಿ ಹಾಗೂ ಅದರಲ್ಲಿದ್ದವರ ಶೋಧ ಮತ್ತು ರಕ್ಷಣಾ ಕಾರ್ಯ ಆರಂಭಿಸಲಾಗಿದೆ. ದೋಣಿಯಲ್ಲಿದ್ದವರು ಯಾವ ದೇಶದವರು ಎಂಬ ಮಾಹಿತಿ ಲಭಿಸಿಲ್ಲ ಎಂದು ಇಲಾಖೆ ಹೇಳಿದೆ.

  ಯುರೋಪಿಯನ್ ದೇಶಗಳನ್ನು ಅಕ್ರಮವಾಗಿ ಪ್ರವೇಶಿಸಲು ಟರ್ಕಿ ಸಮುದ್ರ ಮಾರ್ಗವನ್ನು ವಲಸಿಗರು ಹೆಚ್ಚಾಗಿ ಬಳಸುತ್ತಿದ್ದಾರೆ. ಇವರನ್ನು ದೋಣಿಯಲ್ಲಿ ಮಿತಿಮೀರಿ ತುಂಬಿಸಿಕೊಂಡು ಹೋಗುತ್ತಿರುವುದರಿಂದ ಹಲವು ದುರಂತಗಳು ಸಂಭವಿಸಿವೆ. ಯುರೋಪಿಯನ್ ಯೂನಿಯನ್ ಗೆ ವಲಸಿಗರ ಅಕ್ರಮ ಪ್ರವೇಶಕ್ಕೆ ತನ್ನ ಸಮುದ್ರಮಾರ್ಗವನ್ನು ಬಳಸಲು ಅನುಮತಿ ನೀಡುವುದಿಲ್ಲ ಎಂಬ ಒಪ್ಪಂದಕ್ಕೆ 2016ರಲ್ಲಿ ಟರ್ಕಿ ಸಹಿಹಾಕಿದ್ದು, ಇದಕ್ಕೆ ಪ್ರತಿಯಾಗಿ ಯುರೋಪಿಯನ್ ಯೂನಿಯನ್ ದೇಶಗಳು ಟರ್ಕಿಗೆ ಆರ್ಥಿಕ ನೆರವು ನೀಡುತ್ತಿವೆ.

ಸಂಘರ್ಷ ಪೀಡಿತ ಸಿರಿಯಾದಿಂದ ಓಡಿಬಂದಿರುವ ಸುಮಾರು 3.7 ಮಿಲಿಯನ್ ನಿರಾಶ್ರಿತರು ಈಗ ಟರ್ಕಿಯಲ್ಲಿದ್ದಾರೆ. ಇವರಿಗೆ ಆಶ್ರಯ ನೀಡಿದ್ದಕ್ಕೆ ಟರ್ಕಿಗೆ ಮುಂದಿನ ಕೆಲ ವರ್ಷ ಸುಮಾರು 3.6 ಬಿಲಿಯನ್ ಡಾಲರ್ ನೆರವು ಮುಂದುವರಿಸಲು ಯುರೋಪಿಯನ್ ಯೂನಿಯನ್ ಒಪ್ಪಿದೆ. ಈ ಮಧ್ಯೆ, ಅಪಘಾನ್ನಲ್ಲಿ ತಾಲಿಬಾನ್ ಮತ್ತು ಸರಕಾರಿ ಪಡೆಗಳ ಮಧ್ಯೆ ಸಂಘರ್ಷ ತೀವ್ರಗೊಂಡಿರುವುದರಿಂದ ಅಲ್ಲಿಂದ ಗುಳೇ ಹೋಗುವ ವಲಸಿಗರೂ ಟರ್ಕಿಯತ್ತ ಬರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News