ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ರಿಯಾ ಮಲಿಕ್ ಗೆ ಚಿನ್ನ

Update: 2021-07-25 14:12 GMT

ಹೊಸದಿಲ್ಲಿ:ಹಂಗೇರಿಯ ಬುಡಾಪೆಸ್ಟ್‌ನಲ್ಲಿ ರವಿವಾರ ನಡೆದ ಕೆಡೆಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಜೂನಿಯರ್ ಕುಸ್ತಿಪಟು ಪ್ರಿಯಾ ಮಲಿಕ್ 73 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಕೆಡೆಟ್ ವರ್ಲ್ಡ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಾಗಿದ್ದು, ವಿಶ್ವದಾದ್ಯಂತ 17 ವರ್ಷಕ್ಕಿಂತ ಕಡಿಮೆ ವಯಸ್ಸಿನ "ಅತ್ಯುತ್ತಮ ಗ್ರೀಕೋ-ರೋಮನ್, ಫ್ರೀಸ್ಟೈಲ್ ಮತ್ತು ಮಹಿಳಾ ಕುಸ್ತಿಪಟುಗಳು" ಇದರಲ್ಲಿ ಸ್ಪರ್ಧಿಸುತ್ತಾರೆ.

73 ಕೆ.ಜಿ. ವಿಭಾಗದಲ್ಲಿ ಪ್ರಿಯಾ ಮಲಿಕ್ 5-0  ಅಂತರದಿಂದ ಬೆಲಾರಸ್‌ನ ಕ್ಸೆನಿಯಾ ಪಟಪೋವಿಚ್ ಅವರನ್ನು ಸೋಲಿಸಿ ಚಿನ್ನ ಗೆದ್ದಿದ್ದಾರೆ ಎಂದು ವರದಿಯಾಗಿದೆ.

ಪ್ರಿಯಾ ಮಲಿಕ್ ಅವರು 2019 ರಲ್ಲಿ ಪುಣೆಯಲ್ಲಿ ನಡೆದ ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು. ಶುಕ್ರವಾರ ಜಸ್ಕರನ್ ಸಿಂಗ್ ಅವರು 60 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. ಅವರು ಉಜ್ಬೇಕಿಸ್ತಾನ್‌ನ ಕಮ್ರಾನ್‌ಬೆಕ್ ಕಡಮೊವ್ ವಿರುದ್ಧ ಸೋತಿದ್ದಾರೆ.

ಪ್ರಿಯಾ ಮಲಿಕ್ ಅವರ ಗೆಲುವಿನ ಬಳಿಕ  ಟ್ವಿಟ್ಟರ್ ನಲ್ಲಿ ಅಭಿನಂದನಾ ಸಂದೇಶಗಳು ಹರಿದುಬರುತ್ತಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ  ಹರಿಯಾಣ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ಅವರು ಪ್ರಿಯಾ ಸಾಧನೆಗೆ ಅಭಿನಂದನೆ ಸಲ್ಲಿಸಿದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು  ಪ್ರಿಯಾ ಮಲಿಕ್ "ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News