ರಶ್ಯ ನೌಕಾ ಪಡೆಯಿಂದ ತಡೆಯಲು ಅಸಾಧ್ಯವಾದ ದಾಳಿ ಸಾಧ್ಯ: ಪುಟಿನ್

Update: 2021-07-26 13:36 GMT

ಮಾಸ್ಕೋ (ರಶ್ಯ), ಜು. 26: ರಶ್ಯದ ನೌಕಾಪಡೆಯು ಯಾವುದೇ ಶತ್ರುವನ್ನು ಗುರುತಿಸಬಲ್ಲದು ಹಾಗೂ ಅಗತ್ಯ ಬಿದ್ದರೆ ತಡೆಯಲು ಅಸಾಧ್ಯವಾದ ದಾಳಿಯನ್ನು ನಡೆಸಬಲ್ಲದು ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರವಿವಾರ ಹೇಳಿದ್ದಾರೆ.

ಕ್ರೈಮಿಯ ಪರ್ಯಾಯ ದ್ವೀಪದ ಮೂಲಕ ಬ್ರಿಟನ್‌ ನ ಯುದ್ಧನೌಕೆಯೊಂದು ಹಾದು ಹೋದ ವಾರಗಳ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ನೀರಿನಡಿಯಲ್ಲಿ, ನೀರಿನ ಮೇಲಿನಲ್ಲಿ ಅಥವಾ ಆಕಾಶದಲ್ಲಿರುವ ಯಾವುದೇ ಶತ್ರುವನ್ನು ಪತ್ತೆಹಚ್ಚು ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ ಹಾಗೂ ಅಗತ್ಯಬಿದ್ದರೆ, ಅದರ ವಿರುದ್ಧ ತಡೆಯಲು ಅಸಾಧ್ಯವಾದ ದಾಳಿಯನ್ನು ಮಾಡಬಲ್ಲೆವು ಎಂದು ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ನೌಕಾಪಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪುಟಿನ್ ಹೇಳಿದರು.

ಜೂನ್ ನಲ್ಲಿ ಕಪ್ಪು ಸಮುದ್ರದಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಪುಟಿನ್ರ ಮಾತುಗಳು ಮಹತ್ವ ಪಡೆದುಕೊಂಡಿವೆ. ಅಂದು ಕ್ರೈಮಿಯ ಜಲಪ್ರದೇಶದಿಂದ ಬ್ರಿಟಿಶ್ ಯುದ್ಧನೌಕೆಯೊಂದನ್ನು ಓಡಿಸಲು ಎಚ್ಚರಿಕೆಯ ಗುಂಡುಗಳನ್ನು ಹಾರಿಸಿರುವುದಾಗಿ ಹಾಗೂ ಅದರ ದಾರಿಯಲ್ಲಿ ಬಾಂಬ್‌ಗಳನ್ನು ಉದುರಿಸಿರುವುದಾಗಿ ರಶ್ಯ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News