ಗಾವಸ್ಕರ್ ಪ್ರಕಾರ ಇವರಿಬ್ಬರು ಹಾರ್ದಿಕ್ ಪಾಂಡ್ಯ ಸ್ಥಾನ ತುಂಬಬಲ್ಲ ಆಲ್‌ರೌಂಡರ್‌ಗಳು

Update: 2021-07-28 04:07 GMT
ಸುನೀಲ್ ಗವಾಸ್ಕರ್ ಮತ್ತು ಹಾರ್ದಿಕ್ ಪಾಂಡ್ಯ (Photo credit Twitter & PTI)

ಮುಂಬೈ, ಜು.28: ಹಾರ್ದಿಕ್ ಪಾಂಡ್ಯ ಅವರ ಫಾರ್ಮ್ ಕುಸಿದಿರುವುದು ಭಾರತ ಕ್ರಿಕೆಟ್ ತಂಡಕ್ಕೆ ಕಳವಳಕಾರಿ ಅಂಶ. ತಮ್ಮ ಬೌಲಿಂಗ್ ಮತ್ತು ಬ್ಯಾಟಿಂಗ್ ಸಾಮರ್ಥ್ಯದಿಂದ ಹಲವು ಪಂದ್ಯಗಳನ್ನು ಭಾರತಕ್ಕೆ ಗೆದ್ದುಕೊಟ್ಟಿರುವ ಅವರ ಫಾರ್ಮ್ ಇತ್ತೀಚೆಗೆ ಕೈಕೊಡುತ್ತಿದೆ. ಅವರ ದೊಡ್ಡ ಹೊಡೆತಗಳು ಕಾಣೆಯಾಗಿವೆ; ಬೆನ್ನು ಶಸ್ತ್ರಚಿಕಿತ್ಸೆ ಬಳಿಕ ಬೌಲರ್ ಆಗಿ ಅವರ ಪಾತ್ರವೂ ಸೀಮಿತವಾಗಿದೆ. ಪರಿಣಾಮಕಾರಿ ಮಧ್ಯಮ ವೇಗಿಯಾಗಿ ಅವರು ಈಗ ಉಳಿದುಕೊಂಡಿಲ್ಲ.

ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಪಾಂಡ್ಯ ಎರಡು ಇನಿಂಗ್ಸ್ ಆಡಿದ್ದರು. ಎರಡನೇ ಏಕದಿನಲ್ಲಿ ಅವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಮೂರನೇ ಪಂದ್ಯದಲ್ಲಿ ಉತ್ತಮ ಆರಂಭ ಪ್ರದರ್ಶಿಸಿದರೂ, ಎಡಗೈ ಸ್ಪಿನ್ನರ್ ಜಯವಿಕ್ರಮ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಟಿ-20 ಪಂದ್ಯದಲ್ಲೂ ಪಾಂಡ್ಯ ಕೇವಲ 10 ರನ್ ಗಳಿಸಿದ್ದರು. ಜತೆಗೆ ಉತ್ತಮ ಬೌಲಿಂಗ್ ಪ್ರದರ್ಶನ ಕೂಡಾ ಅವರಿಂದ ಬರಲಿಲ್ಲ.

ಈ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ಆಲ್‌ರೌಂಡರ್ ಯಾರು ಎನ್ನುವ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗಾವಸ್ಕರ್ ಪ್ರಕಾರ ದೀಪಕ್ ಚಹರ್ ಮತ್ತು ಭುವನೇಶ್ವರ ಕುಮಾರ್. "ನೀವು ಇತ್ತೀಚೆಗೆ ದೀಪಕ್ ಚಹರ್ ಪ್ರದರ್ಶನ ನೋಡಿರಬಹುದು. ಆಲ್‌ರೌಂಡರ್ ಆಗಬಲ್ಲೆ ಎನ್ನುವುದನ್ನು ಅವರು ನಿರೂಪಿಸಿದ್ದಾರೆ. ಆದರೆ ಭುವನೇಶ್ವರ್ ಕುಮಾರ್‌ಗೆ ಆ ಅವಕಾಶ ಸಿಗಲಿಲ್ಲ. ಎರಡು ಮೂರು ವರ್ಷಗಳ ಹಿಂದೆ, ಭಾರತ ಶ್ರೀಲಂಕಾದಲ್ಲಿ ಆಡಿದಾಗ ಧೋನಿ ಜತೆ ಸೇರಿ ಭುವನೇಶ್ವರ್ ಭಾರತಕ್ಕೆ ಪಂದ್ಯ ಗೆದ್ದುಕೊಟ್ಟರು. ಆ ಪರಿಸ್ಥಿತಿ ಎರಡನೇ ಏಕದಿನ ಪಂದ್ಯದ ಪರಿಸ್ಥಿತಿಯನ್ನೇ ಹೋಲುತ್ತಿತ್ತು. ಭಾರತ 7-8 ವಿಕೆಟ್ ಕಳೆದುಕೊಂಡಿತ್ತು. ಭುವನೇಶ್ವರ್ ಹಾಗೂ ಧೋನಿ ಆ ಪಂದ್ಯ ಗೆದ್ದರು" ಎಂದು ಗಾವಸ್ಕರ್ ಸ್ಪೋರ್ಟ್ಸ್ ಟಾಕ್‌ನಲ್ಲಿ ನೆನಪಿಸಿಕೊಂಡಿದ್ದಾರೆ.

ಎರಡನೇ ಏಕದಿನದಲ್ಲಿ ಚಹರ್ ಅಜೇಯ 69 ರನ್ ಗಳಿಸಿ ಭಾರತಕ್ಕೆ ರೋಚಕ ಜಯ ತಂದುಕೊಟ್ಟಿದ್ದರು. ಇನ್ನೊಂದೆಡೆ ಭುವನೇಶ್ವರ್, ಟೆಸ್ಟ್‌ಗಳಲ್ಲಿ ಮೂರು ಅರ್ಧಶತಕ, ಏಕದಿನ ಪಂದ್ಯದಲ್ಲಿ ಒಂದು ಅರ್ಧ ಶತಕ ಗಳಿಸಿದ್ದು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಸರಾಸರಿ 42.75 ರಷ್ಟಿದೆ. ಈ ಕಾರಣದಿಂದ ಇಬ್ಬರನ್ನೂ ಸೂಕ್ತ ಆಲ್‌ರೌಂಡರ್‌ಗಳಾಗಿ ಬೆಳೆಸುವ ಅಗತ್ಯವಿದೆ ಎನ್ನುವುದು ಅವರ ಸಲಹೆ.

"ನೀವು ಯೋಚಿಸಿರಲು ಸಾಧ್ಯವಿಲ್ಲ; ಆದರೆ ಈ ಇಬ್ಬರು ಆಲ್‌ರೌಂಡರ್‌ಗಳಾಗಬಲ್ಲರು. ಅವರಲ್ಲಿ ಬ್ಯಾಟಿಂಗ್ ಪ್ರತಿಭೆ ಇದೆ. ನೀವು ಒಬ್ಬರನ್ನು ಮಾತ್ರ ನೋಡುತ್ತಿದ್ದೀರಿ. 2-3 ವರ್ಷಗಳಲ್ಲಿ ನಿಜವಾಗಿಯೂ ಅರ್ಹರಾದ ಇತರರಿಗೆ ಸಾಕಷ್ಟು ಅವಕಾಶಗಳು ಸಿಕ್ಕಿಲ್ಲ. ಅದ್ದರಿಂದ ಈಗ ನೀವು ಒಬ್ಬರನ್ನೇ ಅವಲಂಬಿಸುವಂತಾಗಿದೆ. ಈ ಹುಡುಗರಿಗೆ ಅವಕಾಶ ನೀಡಿದರೆ ನೀವು ಆಲ್‌ರೌಂಡರ್‌ಗಳನ್ನು ಬೆಳೆಸಬಹುದು" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News