ಜಾಗತಿಕ ಬಡತನ, ಆರ್ಥಿಕ ಅಸಮಾನತೆಯಲ್ಲಿ ಹೆಚ್ಚಳ: ಐಎಂಎಫ್ ಎಚ್ಚರಿಕೆ

Update: 2021-07-28 14:45 GMT

ನ್ಯೂಯಾರ್ಕ್, ಜು. 28: ಜಾಗತಿಕ ಆರ್ಥಿಕ ಚೇತರಿಕೆ ಮುಂದುವರಿಯುತ್ತದೆಯಾದರೂ, ಲಸಿಕೆ ವಿತರಣೆಯಲ್ಲಿನ ಅಸಮಾನತೆ ಮತ್ತು ಆರ್ಥಿಕ ಬೆಂಬಲದ ಕೊರತೆಯಿಂದಾಗಿ ಅಭಿವೃದ್ಧಿಹೊಂದಿದ ದೇಶಗಳು ಮತ್ತು ಅಭಿವೃದ್ಧಿಶೀಲ ದೇಶಗಳ ನಡುವಿನ ಅಂತರ ಹೆಚ್ಚುತ್ತದೆ ಎಂದು ಅಂತರ್ ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಂಗಳವಾರ ಎಚ್ಚರಿಸಿದೆ.

ಈ ವರ್ಷ ಜಾಗತಿಕ ಆರ್ಥಿಕತೆ 6 ಶೇಕಡದಷ್ಟು ಬೆಳೆಯುತ್ತದೆ ಹಾಗೂ ಈ ವಿಷಯದಲ್ಲಿ ತಾನು ಎಪ್ರಿಲ್‌ನಲ್ಲಿ ಮಾಡಿರುವ ಅಂದಾಜಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಐಎಂಎಫ್ ತನ್ನ ಹೊಸ ಜಾಗತಿಕ ಆರ್ಥಿಕ ಮುನ್ನೋಟದಲ್ಲಿ ತಿಳಿಸಿದೆ.
ಆದರೆ, ಚೇತರಿಕೆಯ ಪ್ರಮಾಣವು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ ಎಂದು ಐಎಂಎಫ್ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಹೇಳಿದರು.

‘‘ಜಗತ್ತಿನಾದ್ಯಂತ ಕೊರೋನ ವೈರಸ್ ಸಾಂಕ್ರಾಮಿಕವನ್ನು ಸೋಲಿಸದ ಹೊರತು ಸಂಪೂರ್ಣ ಚೇತರಿಕೆ ಸಾಧ್ಯವಿಲ್ಲ’’ ಎಂದು ಆನ್ಲೈನ್ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಹೇಳಿದರು. ಈ ಸಂದರ್ಭದಲ್ಲಿ ಅವರು ‘ಫಾಲ್ಟ್ ಲೈನ್ಸ್ ವೈಡನ್ ಇನ್ ದ ಗ್ಲೋಬಲ್ ಎಕಾನಮಿ’ ಎಂಬ ತಲೆಬರಹದ ಜಾಗತಿಕ ಆರ್ಥಿಕ ಮುನ್ನೋಟವನ್ನು ಬಿಡುಗಡೆಗೊಳಿಸಿದರು.

ಮುಂದಿನ ವರ್ಷ ಜಾಗತಿಕ ಆರ್ಥಿಕ ಬೆಳವಣಿಗೆ 4.9 ಶೇಕಡಕ್ಕೆ ಇಳಿಯುತ್ತದೆ. 2022ರಲ್ಲಿ ಮುಂದುವರಿದ ದೇಶಗಳ ಆರ್ಥಿಕ ಬೆಳವಣಿಗೆ 5.6 ಶೇಕಡದಿಂದ 4.4 ಶೇಕಡಕ್ಕೆ ಇಳಿದರೆ, ಮುಂದುವರಿಯುತ್ತಿರುವ ಮತ್ತು ಬಡ ದೇಶಗಳ ಆರ್ಥಿಕ ಬೆಳವಣಿಗೆ 6.3 ಶೇಕಡದಿಂದ 5.2 ಶೇಕಡಕ್ಕೆ ಕುಸಿಯುತ್ತದೆ ಎಂದು ಐಎಂಎಫ್ ತನ್ನ ಹೊಸ ವರದಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News