×
Ad

ಪೆಲೆಸ್ತೀನ್ ನ 3 ವರ್ಷದ ಬಾಲಕನಿಗೆ ಕಿಡ್ನಿ ದಾನ ಮಾಡಲು ನಿರ್ಧರಿಸಿದ ಇಸ್ರೇಲ್ ಮಹಿಳೆ

Update: 2021-07-28 20:59 IST
photo: twitter/@101Biography

ಜೆರುಸಲೇಂ, ಜು.28: ಇಸ್ರೇಲ್ ನ ಶಿಕ್ಷಕಿಯೊಬ್ಬರು ತನ್ನ ಕಿಡ್ನಿಯನ್ನು ಗಾಝಾ ಪಟ್ಟಿಯಲ್ಲಿ ನೆಲೆಸಿರುವ ಪೆಲೆಸ್ತೀನ್ನ 3 ವರ್ಷದ ಬಾಲಕನಿಗೆ ದಾನ ನೀಡಲು ನಿರ್ಧರಿಸಿದ್ದು ತಮ್ಮ ಆಯ್ಕೆಯು ನಿರಂತರ ಸಂಘರ್ಷದ ಪ್ರದೇಶದಲ್ಲಿ ಔದಾರ್ಯದ ಕಾರ್ಯಕ್ಕೆ ನಿದರ್ಶನವಾಗಲಿ ಎಂದು ಆಶಿಸುವುದಾಗಿ ಹೇಳಿದ್ದಾರೆ. 

ಉತ್ತರ ಇಸ್ರೇಲ್ನಲ್ಲಿ ನರ್ಸರಿ ಶಾಲಾ ಶಿಕ್ಷಕಿಯಾಗಿರುವ ಇದಿತ್ ಹರೆಲ್ ಸೆಗಾಲ್(50 ವರ್ಷ) ʼಅರ್ಥಪೂರ್ಣವಾಗಿ ಬದುಕಬೇಕುʼ ಎಂಬ ತನ್ನ ಅಜ್ಜ ನ ಮಾತಿನಿಂದ ಪ್ರೇರಣೆಗೊಂಡು ಹಾಗೂ, ಜೀವ ಉಳಿಸುವುದಕ್ಕಿಂತ ದೊಡ್ಡ ಕರ್ತವ್ಯ ಇನ್ನೊಂದಿಲ್ಲ ಎಂಬ ಯಹೂದಿ ಸಂಪ್ರದಾಯದಿಂದ ಸ್ಫೂರ್ತಿ ಪಡೆದು, ಅಗತ್ಯವಿದ್ದವರಿಗೆ ತನ್ನ ಒಂದು ಕಿಡ್ನಿ ದಾನ ಮಾಡುವುದಾಗಿ 9 ತಿಂಗಳ ಹಿಂದೆ ಅಭಿಯಾನ ಆರಂಭಿಸಿದ್ದರು. ಈಗ ಅಗತ್ಯವಿರುವ ವ್ಯಕ್ತಿ, ಗಾಝಾಪಟ್ಟಿಯ 3 ವರ್ಷದ ಬಾಲಕನಿಗೆ ಈ ಅದೃಷ್ಟ ಒಲಿದಿದೆ. 

‘ನಿನಗೆ ನನ್ನ ಪರಿಚಯ ಇರಲಾರದು, ಆದರೆ ಶೀಘ್ರವೇ ನಾನು ನಿನಗೆ ಅತ್ಯಂತ ಆಪ್ತಳಾಗುತ್ತೇನೆ, ಯಾಕೆಂದರೆ ನನ್ನ ಕಿಡ್ನಿ ನಿನ್ನ ದೇಹದಲ್ಲಿರುತ್ತದೆ. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೀನು ಸುದೀರ್ಘ ಮತ್ತು ಆರೋಗ್ಯಯುತ ಜೀವನ ನಡೆಸುವಂತಾಗಲಿ’ ಎಂದು ಇದಿತ್ ಹರೆಲ್ ಹೀಬ್ರೂ ಭಾಷೆಯಲ್ಲಿ ಶುಭಹಾರೈಸಿ ಬರೆದ ಪತ್ರವನ್ನು ಆಕೆಯ ಸ್ನೇಹಿತರು ಅರೆಬಿಕ್ ಭಾಷೆಗೆ ಅನುವಾದಿಸಿ ಬಾಲಕನ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. 

ಇಸ್ರೇಲ್ ಮತ್ತು ಪೆಲೆಸ್ತೀನ್ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ ಬಾಲಕನ ಹೆಸರನ್ನು ಬಹಿರಂಗಗೊಳಿಸದಂತೆ ಆತನ ಕುಟುಂಬದವರು ಕೋರಿದ್ದರು. ಪೆಲೆಸ್ತೀನ್ ಬಾಲಕನಿಗೆ ಕಿಡ್ನಿ ದಾನ ಮಾಡುವ ನಿರ್ಧಾರಕ್ಕೆ ಇದಿತ್ ಪತಿ ಹಾಗೂ ಮೂವರು ಮಕ್ಕಳಲ್ಲಿ ಹಿರಿಯ ಮಗನಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ತಂದೆ ತನ್ನೊಡನೆ ಮಾತು ಬಿಟ್ಟಿದ್ದರು. ಅನವಶ್ಯಕವಾಗಿ ಬದುಕನ್ನು ಅಪಾಯಕ್ಕೆ ಒಡ್ಡಿಕೊಳ್ಳಬಾರದು ಎಂದು ಅವರು ಸಲಹೆ ನೀಡಿದ್ದರು ಎಂದು ಇದಿತ್ ಹೇಳಿದ್ದಾರೆ. ಕೇವಲ 11 ದಿನಗಳ ಯುದ್ಧದ ಬಳಿಕ ನಾನು ಸಿಟ್ಟು ಮತ್ತು ಹತಾಶೆಯನ್ನು ಬದಿಗಿರಿಸಿ ಕೇವಲ ಒಂದು ವಿಷಯದ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ಇದೇ ರೀತಿ ಇನ್ನಷ್ಟು ಜನ ವರ್ತಿಸಿದರೆ ಆಗ ಜಗಳವಾಡಲು ವಿಷಯವೇ ಇಲ್ಲವಾಗುತ್ತದೆ ಎಂದು ಇದಿತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News