ಪೆಗಾಸಸ್ ಪ್ರಕರಣ; ಕೆಲವು ದೇಶಗಳಿಗೆ ಸ್ಪೈವೇರ್ ತಂತ್ರಜ್ಞಾನ ಬಳಕೆಗೆ ನಿಷೇಧ : ಮಾಧ್ಯಮ ವರದಿ

Update: 2021-07-30 15:43 GMT

ಜೆರುಸಲೇಂ, ಜು.30: ಪೆಗಾಸಸ್ ಗೂಢಚಾರಿಕೆ ಹಗರಣದ ವಿರುದ್ಧ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗಿರುವಂತೆಯೇ, ಪೆಗಾಸಸ್ ಸ್ಪೈವೇರ್ ಅಭಿವೃದ್ಧಿಪಡಿಸಿರುವ ಇಸ್ರೇಲ್ ನ ಎನ್ಎಸ್ಒ ಸಂಸ್ಥೆ, ಹಲವು ದೇಶಗಳ ಸರಕಾರ ಈ ತಂತ್ರಜ್ಞಾನವನ್ನು ಬಳಸುವುದಕ್ಕೆ ತಾತ್ಕಾಲಿಕವಾಗಿ ತಡೆಯೊಡ್ಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 ಪೆಗಾಸಸ್ ಸ್ಪೈವೇರ್ ಅನ್ನು ಪತ್ರಕರ್ತರ ಮತ್ತು ರಾಜಕಾರಣಿಗಳ ಫೋನ್ ಗಳನ್ನು ಹ್ಯಾಕ್ ಮಾಡಲು ಬಳಸಲಾಗಿದೆ ಎಂಬ ಹೇಳಿಕೆಯ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ಯಾವ ದೇಶ ಅಥವಾ ಯಾವ ಇಲಾಖೆಗಳಿಗೆ ಈ ನಿಷೇಧ ಅನ್ವಯಿಸುತ್ತದೆ ಮತ್ತು ಎಷ್ಟು ಸಮಯದವರೆಗೆ ನಿಷೇಧವಿದೆ ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿಲ್ಲ ಎಂದು ಅಮೆರಿಕಾದ ನ್ಯಾಷನಲ್ ಪಬ್ಲಿಕ್ ರೇಡಿಯೊ(ಎನ್ಪಿಆರ್) ಹೇಳಿದೆ. ಕೆಲವು ಗ್ರಾಹಕರ ಬಗ್ಗೆ ತನಿಖೆ ನಡೆಯಲಿದೆ. ಕೆಲವರನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಪೆಗಾಸಸ್ ನ ಸಿಬ್ಬಂದಿಯೋರ್ವರು ಮಾಹಿತಿ ನೀಡಿರುವುದಾಗಿ ಎನ್ಪಿಆರ್ ಹೇಳಿದೆ.

ಸುಮಾರು 40 ದೇಶಗಳಲ್ಲಿ ಎನ್ಎಸ್ಒ 60 ಗ್ರಾಹಕರನ್ನು ಹೊಂದಿದ್ದು, ಗುಪ್ತಚರ ಏಜೆನ್ಸಿ, ಕಾನೂನು ಜಾರಿ ಇಲಾಖೆಗಳು ಹಾಗೂ ಸೇನಾಪಡೆಗಳು ಇದರಲ್ಲಿವೆ. ಕಳೆದ ಕೆಲ ವರ್ಷಗಳಿಂದ 5 ದೇಶಗಳು ತನ್ನ ತಂತ್ರಜ್ಞಾನ ಬಳಸುವುದನ್ನು ನಿಷೇಧಿಸಿರುವುದಾಗಿ ಪೆಗಾಸಸ್ ಗೂಢಚಾರಿಕೆ ವಿವಾದ ಆರಂಭಕ್ಕೂ ಮುನ್ನ ಎನ್ಎಸ್ಒ ಹೇಳಿತ್ತು. ಸೌದಿ ಅರೆಬಿಯಾ, ದುಬೈ ಹಾಗೂ ಮೆಕ್ಸಿಕೋದ ಕೆಲವು ಸರಕಾರಿ ಏಜೆನ್ಸಿಗಳು ಈ ಪಟ್ಟಿಯಲ್ಲಿವೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News