ಒಂದೇ ಒಲಿಂಪಿಕ್ಸ್ ನಲ್ಲಿ 7 ಪದಕಗಳನ್ನು ಜಯಿಸಿ ವಿಶ್ವ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯದ ಈಜುಗಾರ್ತಿ ಎಮ್ಮಾ ಮೆಕಿಯನ್
ಟೋಕಿಯೊ:ಆಸ್ಟ್ರೇಲಿಯದ ಈಜುಗಾರ್ತಿ ಎಮ್ಮಾ ಮೆಕಿಯನ್ ಜಪಾನ್ ನಲ್ಲಿ ಈಗ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಒಟ್ಟು 7 ಪದಕಗಳನ್ನು ಜಯಿಸುವುದರೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಮೆಕಿಯನ್ ಒಲಿಂಪಿಕ್ಸ್ ಮಹಾಕೂಟದಲ್ಲಿ ಅತ್ಯಂತ ಹೆಚ್ಚು ಪದಕಗಳನ್ನು ಗೆದ್ದಿರುವ ಮಹಿಳಾ ಸ್ಪರ್ಧಿ ಎಂಬ ದಾಖಲೆಯನ್ನು ಸರಿಟ್ಟಿದ್ದಾರೆ. ಈ ಹಿಂದೆ 1952ರಲ್ಲಿ ಸೋವಿಯತ್ ಒಕ್ಕೂಟದ ಜಿಮ್ನಾಸ್ಟ್ ಪಟು ಮರಿಯ ಗೊರೊವೊವಿಸ್ಕ ಏಳು ಪದಕಗಳನ್ನು ಜಯಿಸಿದ್ದರು.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈಜು ಸ್ಪರ್ಧೆಯಲ್ಲಿ ಅತ್ಯಂತ ಹೆಚ್ಚು ಪದಕ ಗೆದ್ದ ಮಹಿಳಾ ಈಜುಗಾರ್ತಿ ಎಂಬ ಹಿರಿಮೆಗೂ ಎಮ್ಮಾ ಪಾತ್ರರಾಗಿದ್ದಾರೆ.
ಎಮ್ಮಾ ಮಕಿಯೆನ್ ರವಿವಾರ 4x100 ಮೀಟರ್ ರಿಲೇ ಯಲ್ಲಿ ಚಿನ್ನದ ಪದಕ ಜಯಿಸುವುದರೊಂದಿಗೆ ಈ ಸಾಧನೆ ಮಾಡಿದರು. ಎಮ್ಮಾ ಮಕಿಯೆನ್, ಕೇಲೀ ಮೆಕ್‌ಕೌನ್, ಚೆಲ್ಸಿಯಾ ಹಾಡ್ಜಸ್ ಹಾಗೂ ಕೇಟ್ ಕ್ಯಾಂಪ್‌ಬೆಲ್ 3 ನಿಮಿಷ 51.60 ಸೆಕೆಂಡುಗಳಲ್ಲಿ ಗುರಿ ತಲುಪುವುದರೊಂದಿಗೆ ಹೊಸ ಒಲಿಂಪಿಕ್ಸ್ ದಾಖಲೆ ನಿರ್ಮಿಸಿದರು. ಅಮೆರಿಕದ ಸ್ವಿಮ್ಮರ್ ಗಳು 3: 51.73 ಹಾಗೂ ಕೆನಡಾ ಈಜುಗಾರ್ತಿಯರು 3: 52.60 ಸೆಕೆಂಡ್ ನಲ್ಲಿ ಗುರಿ ಮುಟ್ಟಿದರು.
27 ರ ಹರಯೆದ ಮೆಕಿಯನ್ ಜಯಿಸಿದ ನಾಲ್ಕನೇ ಚಿನ್ನ ಇದಾಗಿದ್ದು, ಮೂರು ಕಂಚಿನೊಂದಿಗೆ ಒಂದೇ ಒಲಿಂಪಿಕ್ಸ್ ನಲ್ಲಿ 7 ಪದಕಗಳನ್ನು ಜಯಿಸಿದರು. ಈ ಮೂಲಕ ಈಸ್ಟ್ ಜರ್ಮನಿಯ ಕ್ರಿಸ್ಟಿನ್ ಒಟ್ಟೊ ಅವರ ದಾಖಲೆ ಮುರಿದರು. ಕ್ರಿಸ್ಟಿನ್ 1952 ರಲ್ಲಿ ಆರು ಪದಕಗಳನ್ನು ಗೆದ್ದಿದ್ದರು,
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಎಮ್ಮಾ ಮೆಕಿಯನ್ 4x100 ಮೀ. ಪ್ರೀಸ್ಟೈಲ್ ರಿಲೇ(ಚಿನ್ನ, ವಿಶ್ವ ದಾಖಲೆ), 100 ಮೀ. ಫ್ರೀಸ್ಟೈಲ್(ಚಿನ್ನ, ಒಲಿಂಪಿಕ್ಸ್ ದಾಖಲೆ), 50 ಮೀ. ಫ್ರೀಸ್ಟ್ರೈಲ್ (ಚಿನ್ನ), 4x100 ಮೀ. ಮೆಡ್ಲಿ ರಿಲೇ(ಚಿನ್ನ, ಒಲಿಂಪಿಕ್ಸ್ ದಾಖಲೆ), 100 ಮೀ. ಬಟರ್ ಫ್ಲೈ(ಕಂಚು), 4x200 ಮೀ. ಫ್ರೀ ಸ್ಟೈಲ್ ರಿಲೇ(ಕಂಚು), 4x100 ಮೀ. ಮಿಕ್ಸೆಡ್ ಮೆಡ್ಲಿ ರಿಲೇ(ಕಂಚು) ಯಲ್ಲಿ ಪದಕ ಜಯಿಸಿದ್ದಾರೆ.