ಒಲಿಂಪಿಕ್ಸ್: ಕಂಚು ಗೆದ್ದ ಪಿ.ವಿ. ಸಿಂಧು

Update: 2021-08-01 14:57 GMT
photo : PTI

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರವಿವಾರ ಕಂಚಿನ ಪದಕಕ್ಕಾಗಿ ನಡೆದ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಜಯಭೇರಿ ಬಾರಿಸಿದರು. ಈ ಮೂಲಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು.

  ಸಿಂಧು ಅವರು 53 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಚೀನಾದ ಹೀ ಬಿಂಗ್ ಜಿಯಾವೊ ಅವರನ್ನು 21-13, 21-15 ನೇರ ಗೇಮ್ ಗಳ ಅಂತರದಿಂದ ಮಣಿಸಿದರು.

 ಕಳೆದ 15 ಪಂದ್ಯಗಳಲ್ಲಿ ಜಿಯಾವೊ ವಿರುದ್ಧ 9 ಬಾರಿ ಸೋತಿರುವ ಸಿಂಧು ಇಂದು ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದರು. ಈ ಮೂಲಕ ಟೋಕಿಯೊದಲ್ಲಿ ಭಾರತಕ್ಕೆ ಮೂರನೇ ಪದಕ ಗೆದ್ದುಕೊಟ್ಟರು.
ವೇಟ್ ಲಿಫ್ಟರ್ ಮೀರಾಬಾಯಿ ಚಾನು ಈಗಾಗಲೇ ಬೆಳ್ಳಿ ಪದಕವನ್ನು ಬಾಚಿಕೊಂಡಿದ್ದಾರೆ. ಯುವ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿದ್ದಾರೆ.

ಹೈದರಾಬಾದ್ ಆಟಗಾರ್ತಿಗೆ ಇದು ಸತತ ಎರಡನೇ ಒಲಿಂಪಿಕ್ಸ್ ಪದಕ. 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಸಿಂಧು ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News