ಒಲಿಂಪಿಕ್ಸ್: ಭಾರತದ ಪುರುಷರ ಹಾಕಿ ತಂಡ ಸೆಮಿ ಫೈನಲ್ ಗೆ

Update: 2021-08-01 14:40 GMT
photo: twitter/@PIB_India

ಟೋಕಿಯೊ, ಆ.1: ಟೋಕಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು 3-1 ಗೋಲುಗಳ ಅಂತರದಿಂದ ಮಣಿಸಿರುವ ಭಾರತದ ಪುರುಷರ ಹಾಕಿ ತಂಡವು 49 ವರ್ಷಗಳ ಬಳಿಕ ಒಲಿಂಪಿಕ್ಸ್ ನಲ್ಲಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ.

 ರವಿವಾರ ನಡೆದ ಅಂತಿಮ-8ರ ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಭಾರತದ ಪರವಾಗಿ ದಿಲ್‌ಪ್ರೀತ್ ಸಿಂಗ್(7ನೇ ನಿಮಿಷ), ಗುರ್ಜಂತ್ ಸಿಂಗ್ (16ನೇ ನಿಮಿಷ) ಹಾಗೂ ಹಾರ್ದಿಕ್ ಸಿಂಗ್(57ನೇ ನಿಮಿಷ) ಅವರು ತಲಾ ಒಂದು ಫೀಲ್ಡ್ ಗೋಲು ಗಳಿಸಿದರು. ಈ ಮೂಲಕ 8 ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಭಾರತವು ಅಂತಿಮ-4ರ ಹಂತ ತಲುಪಲು ನೆರವಾದರು.

ಗ್ರೇಟ್ ಬ್ರಿಟನ್ ಪರವಾಗಿ ಸ್ಯಾಮ್ ವಾರ್ಡ್ 45ನೇ ನಿಮಿಷದಲ್ಲಿ ಸಮಾಧಾನಕರ ಗೋಲು ಗಳಿಸಿದರು.

ಭಾರತವು 1980ರ ಮಾಸ್ಕೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದರೂ ಆಗ ಕೇವಲ 6 ತಂಡಗಳು ಭಾಗವಹಿಸಿದ್ದ ಕಾರಣ ಸೆಮಿ ಫೈನಲ್ ಪಂದ್ಯ ಇರಲಿಲ್ಲ. ಹೀಗಾಗಿ ಭಾರತವು 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿ ಸೆಮಿ ಫೈನಲ್ ನಲ್ಲಿ ಕಾಣಿಸಿಕೊಂಡಿತ್ತು. ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಭಾರತವು ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಮಿ ಫೈನಲ್ ಪಂದ್ಯವನ್ನು 0-2 ಗೋಲುಗಳ ಅಂತರದಿಂದ ಸೋತಿತ್ತು.

 ಭಾರತವು ಮಂಗಳವಾರ ನಡೆಯಲಿರುವ ಅಂತಿಮ-4ರ ಸುತ್ತಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಬೆಲ್ಜಿಯಂ ತಂಡದ ಸವಾಲನ್ನು ಎದುರಿಸಲಿದೆ. ಬೆಲ್ಜಿಯಂ ತಂಡವು ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿ ಸೆಮಿ ಫೈನಲ್ ತಲುಪಿದೆ.

ಪುರುಷರ ಹಾಕಿ ಸ್ಪರ್ಧಾವಳಿಯ ಮತ್ತೊಂದು ಸೆಮಿ ಫೈನಲ್ ಪಂದ್ಯವು ಆಸ್ಟ್ರೇಲಿಯ ಹಾಗೂ ಜರ್ಮನಿಯ ಮಧ್ಯೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News