ಒಲಿಂಪಿಕ್ಸ್: ‘ಅನ್ಯಾಯ’ ಪ್ರತಿಭಟಿಸಿ ಬಾಕ್ಸಿಂಗ್ ರಿಂಗ್ ಬಳಿ ಕುಳಿತ ಫ್ರೆಂಚ್ ಬಾಕ್ಸರ್
ಟೋಕಿಯೊ, ಆ.1: ಒಲಿಂಪಿಕ್ಸ್ ನಲ್ಲಿ 91 ಕೆಜಿ ವಿಭಾಗದ ಸೂಪರ್- ಹೇವಿವೇಯ್ಟ್ ಬಾಕ್ಸಿಂಗ್ ಕ್ವಾರ್ಟರ್-ಫೈನಲ್‌ನಲ್ಲಿ ರವಿವಾರ ಎದುರಾಳಿಗೆ ತಲೆಯಿಂದ ಗುದ್ದಿದರು ಎಂಬ ಕಾರಣಕ್ಕೆ ಫ್ರೆಂಚ್ ಬಾಕ್ಸರ್ ಮೌರಾದ್ ಅಲೀವ್ ಅವರನ್ನು ಅನರ್ಹಗೊಳಿಸಿದ ನಂತರ ಅಲೀವ್ ರಿಂಗ್ ಬಳಿ ಕುಳಿತು ಅನ್ಯಾಯವನ್ನು ಪ್ರತಿಭಟಿಸಿದ ಘಟನೆ ನಡೆದಿದೆ.
ಮೌರಾದ್ ಅಲೀವ್ ಅವರನ್ನು ಬ್ರಿಟನ್ ಬಾಕ್ಸರ್ ಫ್ರೇಝರ್ ಕ್ಲಾರ್ಕ್ ವಿರುದ್ಧ ಎರಡನೇ ಸುತ್ತಿನಲ್ಲಿ ಅನರ್ಹಗೊಳಿಸಲಾಯಿತು. 26 ವರ್ಷದ ಅಲೀವ್ ನಂತರ ಬಾಕ್ಸಿಂಗ್ ರಿಂಗ್ ಹಗ್ಗಗಳ ಪಕ್ಕದಲ್ಲಿ ಕುಳಿತು ತನಗಾದ ಅನ್ಯಾಯ ಪ್ರತಿಭಟಿಸಿದರು. ತಪ್ಪು ಮಾಡಿದ್ದಾರೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೊಂಡಿರುವ ಅಲೀವ್, "ನನಗೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸಲು ನಾನು ಇಲ್ಲಿ ಕುಳಿತುಕೊಂಡೆ'' ಎಂದು ಹೇಳಿದರು.
"ನಾನು ಈ ಗೇಮ್ಸ್ ಗಾಗಿ ನಾಲ್ಕು ವರ್ಷಗಳ ಕಾಲ ತಯಾರಿ ನಡೆಸಿದ್ದೇನೆ ... ಅನ್ಯಾಯದ ವಿರುದ್ಧ ಹೋರಾಡಲು ನಾನು ನಿಜವಾಗಿಯೂ ಬಯಸುತ್ತೇನೆ, ಹಾಗಾಗಿ ನಾನು ಆ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ತೋರಿಸಲು ಈ ಮಾರ್ಗ ಆಯ್ದುಕೊಂಡೆ "ಎಂದು ಅವರು ಹೇಳಿದರು.
"ಏನಾಯಿತು ಎಂದು ತಿಳಿದುಕೊಳ್ಳಲು ತೀರ್ಪುಗಾರರು ಒಟ್ಟಿಗೆ ಚರ್ಚಿಸಲು ಹೋದರು. ನಾನು ಗೆಲ್ಲುತ್ತೇನೆ ಎಂದು ಅವರು ಹೇಳಿದರು. ಆದರೆ ನಾನು ಅದಾಗಲೇ ಅನರ್ಹನಾಗಿದ್ದೇನೆ ಎಂದು ಬರೆಯಲಾಗಿತ್ತು. ಹೀಗಾಗಿ ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಯಾವುದೇ ಮುನ್ಸೂಚನೆ ಇಲ್ಲದೆ ನನ್ನನ್ನು ನಿಲ್ಲಿಸಲಾಯಿತು. ನೀವು ಸೋತಿದ್ದೀರಿ ಎಂದು ಅವರು ಹೇಳಿದರು. ಹಾಗಾಗಿ ಇದೊಂದು ವಿಧ್ವಂಸಕ ಕೃತ್ಯ ಎಂದು ನಾನು ಭಾವಿಸುತ್ತೇನೆ'' ಎಂದು ಅಲೀವ್ ಹೇಳಿದ್ದಾರೆ.