ಒಲಿಂಪಿಕ್ಸ್ ಹಾಕಿ ಸೆಮಿಫೈನಲ್‌: ಬೆಲ್ಜಿಯಂ ವಿರುದ್ಧ ಭಾರತಕ್ಕೆ ಸೋಲು

Update: 2021-08-03 12:02 GMT

ಟೋಕಿಯೊ: ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ 32 ವರ್ಷಗಳ ಬಳಿಕ ಸೆಮಿಫೈನಲ್‌ಗೆ ಪ್ರವೇಶ ಪಡೆದಿದ್ದ ಭಾರತದ ಪುರುಷರ ತಂಡದ ಅಭಿಯಾನ ಮಂಗಳವಾರ ಮುಕ್ತಾಯವಾಯಿತು.

ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ 2-5 ಗೋಲುಗಳಿಂದ ಪರಾಭವಗೊಳ್ಳುವ ಮೂಲಕ ಭಾರತ ಕಂಚಿನ ಪದಕಕ್ಕಾಗಿ ಸೆಣೆಸಬೇಕಾಗಿದೆ. ಟೂರ್ನಿಯಲ್ಲಿ 14 ಗೋಲು ಗಳಿಸಿದ ಅಲೆಗ್ಸಾಂಡರ್ ಹೆಂಡ್ರಿಕ್ಸ್ ಅವರ ಹ್ಯಾಟ್ರಿಕ್ ಗೋಲು ಭಾರತದ ಪಾಲಿಗೆ ಮಾರಕವಾಯಿತು.

ಮೊದಲ ಕ್ವಾರ್ಟರ್‌ನಲ್ಲಿ ಭಾರತ 2-1 ಗೋಲುಗಳ ಮುನ್ನಡೆ ಗಳಿಸಿತ್ತು. ಬೆಲ್ಜಿಯಂ ಪರ ಲೊಯಿಕ್ ಫ್ಯಾನಿ ಎ, ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರೆ, ಮನ್‌ದೀಪ್ ಸಿಂಗ್ ಹಾಗೂ ಹರಮನ್‌ ಪ್ರೀತ್ ಸಿಂಗ್ ಎರಡು ಗೋಲುಗಳನ್ನು ಗಳಿಸಿ ಭಾರತ ತಿರುಗೇಟು ನೀಡಲು ಕಾರಣರಾದರು. ಎರಡನೇ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ಸಮಬಲ ಸಾಧಿಸಿದರೆ, ಮೂರನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳಿಂದ ಯಾವ ಗೋಲೂ ಬರಲಿಲ್ಲ.

ನಾಲ್ಕನೇ ಕ್ವಾರ್ಟರ್‌ನ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕಿಳಿದ ಬೆಲ್ಜಿಯಂ ಪರ ಹೆಂಡ್ರಿಕ್ಸ್ ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು. ಆಟ ಮುಗಿಯಲು 7 ನಿಮಿಷಗಳಿದ್ದಾಗ ಹೆಂಡ್ರಿಕ್ಸ್ ಮತ್ತೊಂದು ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಗೋಲು ಗಳಿಸಿ ತಂಡದ ಮುನ್ನಡೆಯನ್ನು ಹಿಗ್ಗಿಸಿದರು. ಹೆಂಡ್ರಿಕ್ಸ್ ಈ ಪಂದ್ಯದಲ್ಲಿ ಹ್ಯಾಟ್ರಿಕ್ಸ್ ಸೇರಿದಂತೆ ಟೋಕಿಯೊದಲ್ಲಿ 14 ಗೋಲು ಹೊಡೆದು ಅಮೋಘ ಸಾಧನೆ ಮಾಡಿದರು.

1972ರ ಬಳಿಕ ಮೊದಲ ಬ್ರಿಟನ್ ವಿರುದ್ಧ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್‌ನಲ್ಲಿ 3-1 ಗೋಲುಗಳ ಜಯ ಸಾಧಿಸಿದ ಭಾರತ ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿತ್ತು. ಇನ್ನೊಂದೆಡೆ ಬೆಲ್ಜಿಯಂ, ಸ್ಪೇನ್ ವಿರುದ್ಧ 3-1 ಅಂತರದ ಗೆಲುವು ಸಾಧಿಸಿ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News