×
Ad

ನಾವೆಲ್ಲರೂ ದೇಶಕ್ಕಾಗಿ ಆಡುತ್ತೇವೆ, ಜಾತಿ ನಿಂದನೆ ಮಾಡಬಾರದು: ವಂದನಾ ಕಟಾರಿಯಾ

Update: 2021-08-06 18:44 IST

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ತಂಡದ ಕನಸಿನ ಓಟದ ಪ್ರಮುಖ ಅಂಶಗಳಲ್ಲಿ ಭಾರತ ಫಾರ್ವರ್ಡ್  ಆಟಗಾರ್ತಿ ವಂದನಾ ಕಟಾರಿಯಾ ಅವರ ವೀರೋಚಿತ ಪ್ರದರ್ಶನವೂ ಪ್ರಮುಖವಾಗಿತ್ತು. ಜಾತಿ ನಿಂದನೆ ಕೊನೆಗೊಳಿಸಬೇಕೆಂದು ಹಾರೈಸಿದ ವಂದನಾ , ಜನರು ತಂಡವನ್ನು ಬೆಂಬಲಿಸುತ್ತಾರೆಂಬ ಆಶಾವಾದ ವ್ಯಕ್ತಪಡಿಸಿದರು.

ಟೋಕಿಯೊ ಒಲಿಂಪಿಕ್ಸ್‌ನ ಸೆಮಿಫೈನಲ್‌ನಲ್ಲಿ ಭಾರತವು ಅರ್ಜೆಂಟೀನ ವಿರುದ್ಧ ಸೋತ ನಂತರ, ಹರಿದ್ವಾರದಲ್ಲಿರುವ ವಂದನಾರ ಮನೆ ಸಮೀಪ  ಯುವಕರ ಗುಂಪೊಂದು ಪಟಾಕಿ ಸಿಡಿಸಿತ್ತು, ಸಂಭ್ರಮದಿಂದ ನೃತ್ಯ ಮಾಡಿತು ಹಾಗೂ ಜಾತಿ ನಿಂದನೆ ಮಾಡಿತ್ತೆಂದು ವಂದನಾರ ಕುಟುಂಬದವರು ದೂರಿದ್ದಾರೆ. ಅವರ  ದೂರಿನ ಮೇರೆಗೆ ಪೊಲೀಸರು ಗುರುವಾರ ಮುಖ್ಯ ಆರೋಪಿ ವಿಜಯಪಾಲ್ ನನ್ನು ಬಂಧಿಸಿದ್ದಾರೆ.

ಹರಿದ್ವಾರ ಪೊಲೀಸರ ಹೇಳಿಕೆಯ ಪ್ರಕಾರ, ಐಪಿಸಿ ಸೆಕ್ಷನ್ 504 ರ ಅಡಿಯಲ್ಲಿ ಎಫ್‌ಐಆರ್ (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ಮೂವರು ಆರೋಪಿಗಳಾದ ವಿಜಯ್ ಪಾಲ್, ಅಂಕುರ್ ಪಾಲ್  ಹಾಗೂ  ಸುಮಿತ್ ಚೌಹಾಣ್ ,  ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ದಾಖಲಿಸಲಾಗಿದೆ

ಭಾರತ ಕಂಚಿನ ಪದಕದ ಸುತ್ತಿನಲ್ಲಿ ಬ್ರಿಟನ್ ವಿರುದ್ಧ 3-4ರಿಂದ ಸೋತ  ನಂತರ ಮಾತನಾಡಿದ ವಂದನಾ, ನನ್ನ ಮನೆಯಲ್ಲಿ  ಘಟನೆ ನಡೆದಿರುವ ಬಗ್ಗೆ ಕೇಳಿದ್ದೇನೆ.  ಆದರೆ ತನ್ನ ಕುಟುಂಬದೊಂದಿಗೆ ಇನ್ನೂ ಮಾತನಾಡಲಿಲ್ಲ ಎಂದರು.

 ತಮ್ಮ ಕುಟುಂಬಕ್ಕೆ ಏನಾದರೂ ಸಂದೇಶವಿದೆಯೇ ಎಂದು ಕೇಳಿದ್ದಕ್ಕೆ ಉತ್ತರಿಸಿದ  26 ವರ್ಷ ವಯಸ್ಸಿನ ವಂದನಾ: “ನಾವೆಲ್ಲರೂ ದೇಶಕ್ಕಾಗಿ ಆಡುತ್ತಿದ್ದೇವೆ, ಜಾತಿ ನಿಂದನೆಯಂತಹ ಘಟನೆ ಏನು ನಡೆಯುತ್ತಿದೆಯೋ ಅದು ನಡೆಯಲೇಬಾರದು. ನಾನು ಅದರ ಬಗ್ಗೆ ಸ್ವಲ್ಪ ಕೇಳಿದ್ದರೂ ಹಾಗೆ ಆಗಬಾರದು. ಹಾಕಿಯ ಬಗ್ಗೆ ಮಾತ್ರ ಯೋಚಿಸಿ, ನಾವು ದೇಶಕ್ಕಾಗಿ ಆಡುತ್ತಿದ್ದೇವೆ, ನನ್ನ ಪ್ರಕಾರ ಪ್ರತಿಯೊಂದು ಅಂಶದಲ್ಲೂ ನಾವು ಒಂದಾಗಬೇಕು ಎಂದರು.

ಆಟಗಾರ್ತಿಯ ಸಹೋದರ ಚಂದ್ರ ಶೇಖರ್ ಈ ಮೊದಲು The Indian express ನೊಂದಿಗೆ ಮಾತನಾಡುತ್ತಾ: "ಮೇಲ್ಚಾತಿಯ ಯುವಕರು ನನ್ನ ಜಾತಿಯ ಜನರು ರಾಷ್ಟ್ರೀಯ ತಂಡದಲ್ಲಿ ಹೇಗೆ ಆಡಬಹುದು ಎಂದು ಕೇಳಿದರು? ನಮ್ಮ ಕುಟುಂಬವು ಭಯದ ಸ್ಥಿತಿಯಲ್ಲಿದೆ. ಏಕೆಂದರೆ ಯುವಕರು ನಮ್ಮನ್ನು ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದಾರೆ. ನಾವು ಇಡೀ ಘಟನೆಯನ್ನು ವಿವರಿಸುವ ದೂರು ಸಲ್ಲಿಸಿದ್ದೇವೆ ಎಂದರು.

ವಂದನಾ ಈ ಘಟನೆಗೆ ಸಂಬಂಧಿಸಿ ನಿರ್ದಿಷ್ಟವಾಗಿ ಯಾವುದೇ ಹೇಳಿಕೆ ನೀಡಲಿಲ್ಲ, ಆಕೆ ತನ್ನ ಕುಟುಂಬದವರೊಂದಿಗೆ ಮಾತನಾಡಿದ ನಂತರವೇ ಮಾತನಾಡುತ್ತೇನೆ ಎಂದು ಹೇಳಿದರು.

"ನಾನು ಟೋಕಿಯೊಗೆ ಬಂದಾಗಿನಿಂದ ನನ್ನ ಫೋನ್ ಸ್ವಿಚ್ ಆಫ್ ಮಾಡಿದ್ದೇನೆ. ಹಾಗಾಗಿ ನಾನು ಯಾರೊಂದಿಗೂ ಮಾತನಾಡಲಿಲ್ಲ. ನಾನು ಕುಟುಂಬದವರೊಂದಿಗೆ ಮಾತನಾಡಿದಾಗ, ನಾನು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸುತ್ತೇನೆ. ನಾವೆಲ್ಲರೂ ದೇಶಕ್ಕಾಗಿ ಆಡುತ್ತಿದ್ದೇವೆ ಎಂದು ವಂದನಾ ಹೇಳಿದರು.

ವಂದನಾ ಎಲ್ಲಾ ಸವಾಲುಗಳ ನಡುವೆಯೂ ಟೋಕಿಯೊದಲ್ಲಿ ಭಾರತದ ಸ್ಟಾರ್ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ., ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಗುಂಪಿನ ಪಂದ್ಯದಲ್ಲಿ ವಂದನಾ ಹ್ಯಾಟ್ರಿಕ್ ಗೋಲುಗಳಿಸಿದ ಕಾರಣ ಭಾರತವು  ಒಲಿಂಪಿಕ್ಸ್  ಇತಿಹಾಸದಲ್ಲಿ ಮೊದಲ ಬಾರಿಗೆ ನಾಕೌಟ್ ಸುತ್ತಿಗೆ ಅರ್ಹತೆ ಪಡೆದಿತ್ತು. ಭಾರತವು  ಸೆಮಿಫೈನಲ್‌ನಲ್ಲಿ ಅರ್ಜೆಂಟೀನ ಮತ್ತು ಕಂಚಿನ ಪದಕದ ಪಂದ್ಯದಲ್ಲಿ ಬ್ರಿಟನ್‌ ಎದುರು ಸೋಲುವ ಮೊದಲು ತನ್ನ ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯವನ್ನು ಸೋಲಿಸಿ ದಿಗ್ಭ್ರಮೆಗೊಳಿಸಿತ್ತು. ಭಾರತವು ಅಂತಿಮವಾಗಿ ನಾಲ್ಕನೇ ಸ್ಥಾನ ಪಡೆದಿದ್ದು  ಇದು 41 ವರ್ಷಗಳಲ್ಲಿ ಭಾರತದ  ಅತ್ಯುತ್ತಮ ಸಾಧನೆಯಾಗಿದೆ.

"ಮೊದಲನೆಯದಾಗಿ, ನಮ್ಮ ಇಡೀ ತಂಡವು ಇದಕ್ಕಾಗಿ ತುಂಬಾ ಶ್ರಮಿಸಿದೆ ಹಾಗೂ  ನಾನು ಅವರ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತೇನೆ. ಪಂದ್ಯದಿಂದ ಪಂದ್ಯಕ್ಕೆ ಸುಧಾರಿಸಿದ್ದೇವೆ. ಇಲ್ಲಿಯವರೆಗೆ ತಲುಪಲು ತುಂಬಾ ಸಂತೋಷವಾಗಿದೆ, "ಎಂದು ವಂದನಾ ತಂಡದ ಪ್ರಯತ್ನದ ಬಗ್ಗೆ ಹಮ್ಮೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News