×
Ad

ಒಲಿಂಪಿಕ್ಸ್‌ ನಲ್ಲಿ ಸ್ವರ್ಣ ಗೆದ್ದ ನೀರಜ್‌ ಚೋಪ್ರಾರಿಗೆ ಬಹುಮಾನಗಳ ಸುರಿಮಳೆ

Update: 2021-08-08 16:27 IST

ಹೊಸದಿಲ್ಲಿ: ಟೋಕಿಯೊ 2020 ರ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಭಾರತದ ಎರಡನೇ ವೈಯಕ್ತಿಕ ಚಿನ್ನವನ್ನು ಗಳಿಸಿದ ಬಳಿಕ ಅವರಿಗೆ ಬಹುಮಾನಗಳ ಸುರಿಮಳೆಯಾಗಿದೆ. ಹರಿಯಾಣದ 23 ವರ್ಷದ ಕ್ರೀಡಾಪಟು ನೀರಜ್ ಚೋಪ್ರಾರ ಗಮನಾರ್ಹ ಸಾಧನೆಗಾಗಿ ಹಲವಾರು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ಗೌರವಿಸಿ‌ ಬಹುಮಾನಗಳನ್ನು ಘೋಷಿಸಿದೆ.

ಶನಿವಾರ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು 2 ಕೋಟಿ ರೂ. ವಿಶೇಷ ನಗದು ಬಹುಮಾನವನ್ನು ಘೋಷಿಸಿದ್ದು, ಜಾವೆಲಿನ್‌ ಥ್ರೋದಲ್ಲಿ ಸ್ವರ್ಣ ಪದಕ ಗೆದ್ದ ನೀರಜ್‌ ಚೋಪ್ರಾರ ಕುಟುಂಬ ಮೂಲವು ಪಂಜಾಬ್‌ ಆಗಿರುವುದರಿಂದ ಇದು ಎಲ್ಲ ಭಾರತಿಯರಿಗೆ ಮತ್ತು ಪಂಜಾಬಿಗರಿಗೆ ಹೆಮ್ಮೆಯ ಕ್ಷಣ ಎಂದು ಹೇಳಿದರು. 

ನೀರಜ್ ಚೋಪ್ರಾ ಪಟಿಯಾಲದಲ್ಲಿ ಹೆಚ್ಚಿನ ಸಮಯ ಅಭ್ಯಾಸದಲ್ಲಿ ವ್ಯಯಿಸಿದ್ದರು. ಈ ಹಿಂದೆ, ಅವರು 2018 ರಲ್ಲಿ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು ಮತ್ತು 88.07 ಮೀಟರ್ ಎಸೆತದೊಂದಿಗೆ ಪ್ರಸ್ತುತ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. ಅವರು ಜೂನಿಯರ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದು, 86.48 ಮೀಟರ್ ಎಸೆತದೊಂದಿಗೆ ಅಂಡರ್ 20 ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪಂಜಾಬ್ ಮೂಲದ ಅಭಿನವ್ ಬಿಂದ್ರಾ ಚಿನ್ನದ ಪದಕ ಗೆದ್ದ ನಂತರ ಒಲಿಂಪಿಕ್ ಕ್ರೀಡಾಕೂಟದ ವೈಯಕ್ತಿಕ ವಿಭಾಗದಲ್ಲಿ ಭಾರತೀಯರಿಗೆ ಇದು ಎರಡನೇ ಚಿನ್ನದ ಪದಕವಾಗಿದೆ.

ಚೋಪ್ರಾರವರು ತಮ್ಮ ಸಾಧನೆಗಾಗಿ 6 ಕೋಟಿ ರೂಪಾಯಿ ನಗದು ಬಹುಮಾನ ಪಡೆಯಲಿದ್ದಾರೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್ ಖಟ್ಟರ್ ಶನಿವಾರ ಹೇಳಿದ್ದಾರೆ. ಪಂಚಕುಲದಲ್ಲಿ‌ ಮುಂಬರುವ ಅಥ್ಲೆಟಿಕ್ಸ್ ಸೆಂಟರ್ ಫಾರ್ ಎಕ್ಸಲೆನ್ಸ್‌ಗೆ ಚೋಪ್ರಾ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗುವುದು ಎಂದು ಖಟ್ಟರ್ ಘೋಷಿಸಿದರು.

ಬಿಸಿಸಿಐ ಶನಿವಾರ ಚೋಪ್ರಾಗೆ ಒಂದು ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಚೋಪ್ರಾ ಅವರಿಗೆ ಒಂದು ಕೋಟಿ ಬಹುಮಾನ ಘೋಷಿಸಿದೆ.

"ಅವರ ಅದ್ಭುತ ಸಾಧನೆಯ ಮೆಚ್ಚುಗೆ ಮತ್ತು ಗೌರವದ ಸಂಕೇತವಾಗಿ, ಚೆನ್ನೈ ಸೂಪರ್‌ ಕಿಂಗ್ಸ್‌ ನೀರಜ್‌ ಚೋಪ್ರಾರಿಗೆ 1 ಕೋಟಿ ರೂ. ಬಹುಮಾನ ಘೋಷಿಸಿದೆ. ”ಎಂದು ಸಿಎಸ್‌ಕೆ ಹೇಳಿಕೆಯಲ್ಲಿ ತಿಳಿಸಿದೆ.

ಈ ನಡುವೆ, ಇಂಡಿಗೋ ಶನಿವಾರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ಚೋಪ್ರಾ ಅವರಿಗೆ ಒಂದು ವರ್ಷದವರೆಗೆ ಅನಿಯಮಿತ ಉಚಿತ ಪ್ರಯಾಣವನ್ನು ನೀಡುವುದಾಗಿ ಘೋಷಿಸಿತು. ಉದ್ಯಮಿ ಆನಂದ್‌ ಮಹೀಂದ್ರಾ ನೂತನ ಎಸ್‌ಯುವಿ ನೀಡುವುದಾಗಿ ಘೋಷಿಸಿದ್ದಾರೆ.

ಇಂಡಿಗೊದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೊನೊಜಾಯ್ ದತ್ತಾ, "ನೀರಜ್ ನಿಮ್ಮ ಗಮನಾರ್ಹ ಸಾಧನೆಯ ಬಗ್ಗೆ ಕೇಳಿ ನಮಗೆಲ್ಲ ಸಂತೋಷವಾಯಿತು. ನೀವು ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ ಮತ್ತು ನಮ್ಮ ಎಲ್ಲಾ ವಿಮಾನಗಳಲ್ಲಿ ನಿಮ್ಮನ್ನು ಸ್ವಾಗತಿಸಲು ಇಂಡಿಗೋ ಉದ್ಯೋಗಿಗಳು ನಿಜವಾಗಿಯೂ ಕಾತರಗೊಂಡಿದ್ದಾರೆ" ಎಂದಿದ್ದಾರೆ.

ಶಿಕ್ಷಣ ಕ್ಷೇತ್ರದ ನೂತನ ಉದ್ಯಮವಾಗಿರುವ ʼಬೈಜೂಸ್‌ʼ ನೀರಜ್‌ ಚೋಪ್ರಾಗೆ 2 ಕೋಟಿ ರೂ. ಹಾಗೂ ಒಲಿಂಪಿಕ್ಸ್‌ ನಲ್ಲಿ ಪದಕ ಗೆದ್ದ ಇತರರಾದ ಮೀರಾ ಬಾಯಿ ಚಾನು, ಲವ್ಲಿನಾ ಬೊರ್ಗೊಹೈನ್, ಪಿವಿ ಸಿಂಧು ಮತ್ತು ಭಜರಂಗ್ ಪುನಿಯಾರಿಗೆ ಒಂದು ಕೋಟಿ ರೂ. ಘೋಷಿಸಿದೆ ಎಂದು ತಿಳಿದು ಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News