ಹವಾಮಾನ ದುರಂತದಿಂದ ಪಾರಾಗಲು ಕಟ್ಟಕಡೆಯ ಅವಕಾಶವಿದೆ: ಬ್ರಿಟನ್ ಸಚಿವ

Update: 2021-08-08 18:04 GMT

ಶರ್ಮ ಲಂಡನ್, ಆ.8: ಈ ವರ್ಷಾಂತ್ಯ ಬ್ರಿಟನ್ ಆತಿಥೇಯತ್ವದಲ್ಲಿ ನಡೆಯಲಿರುವ ಶೃಂಗಸಭೆಯು ಹವಾಮಾನ ಬದಲಾವಣೆಯ ಮೇಲೆ ಹಿಡಿತ ಸಾಧಿಸಲು ಜಗತ್ತಿಗೆ ದಕ್ಕಿರುವ ಕಟ್ಟಕಡೆಯ ಅವಕಾಶವಾಗಿದೆ ಎಂದು ಭಾರತೀಯ ಮೂಲದ ಬ್ರಿಟನ್ ಸಚಿವ ಅಲೋಕ್ ಶರ್ಮ ಹೇಳಿದ್ದಾರೆ.

ನವೆಂಬರ್ನಲ್ಲಿ ಗ್ಲಾಸ್ಗೋದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಹವಾಗುಣ ಬದಲಾವಣೆ ಶೃಂಗಸಭೆ ಅಥವಾ ಸಿಒಪಿ26 ವಾಯುಗುಣ ಶೃಂಗಸಭೆಯ ನಿಯೋಜಿತ ಅಧ್ಯಕ್ಷರಾಗಿರುವ ಶರ್ಮ, ಈ ವರ್ಷ ತುರ್ತುಉಪಕ್ರಮಗಳ ಕುರಿತು ಒಪ್ಪಂದಕ್ಕೆ ಬರದಿದ್ದರೆ ವಿಶ್ವದಲ್ಲಿ ಹವಾಗುಣ ದುರಂತ ಸಂಭವಿಸುವುದರಲ್ಲಿ ಸಂಶಯವಿಲ್ಲ ಎಂದರು.

 ಶೃಂಗಸಭೆ ಹಿನ್ನೆಲೆಯಲ್ಲಿ ಬಿಡುವಿಲ್ಲದೆ ಹಲವು ದೇಶಗಳಿಗೆ ಭೇಟಿ ನೀಡುತ್ತಿರುವ ಸಚಿವ ಶರ್ಮ, ಈ ಸಂದರ್ಭದಲ್ಲಿ ಕೆಂಪುಪಟ್ಟಿಯಲ್ಲಿರುವ(ಕೊರೋನ ಸೋಂಕಿನ ಹಿನ್ನೆಲೆಯಲ್ಲಿ) ದೇಶಗಳಿಗೆ ತೆರಳಿದರೂ ಕ್ವಾರಂಟೈನ್ಗೆ ಒಳಪಡದ ಬಗ್ಗೆ ದೇಶದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆದರೆ ತಮ್ಮ ಭೇಟಿಯನ್ನು ಸಮರ್ಥಿಸಿಕೊಂಡಿರುವ ಶರ್ಮ, ಗ್ಲಾಸ್ಗೋ ಶೃಂಗಸಭೆಯ ಯಶಸ್ಸಿಗೆ ತಾನು ಪ್ರಥಮ ಆದ್ಯತೆ ನೀಡುತ್ತೇನೆ ಎಂದಿದ್ದಾರೆ. ವರ್ಚುವಲ್ ಸಭೆಯ ಜೊತೆಗೆಯೇ, ಸಚಿವರ ಜೊತೆ ವೈಯಕ್ತಿಕವಾಗಿ ಚರ್ಚೆ ನಡೆಸುವುದಕ್ಕೆ ಮಹತ್ವವಿದೆ. ಸಹಮತ ಸಾಧಿಸಲು ಮುಖಾಮುಖಿ ಸಂವಾದ ಹೆಚ್ಚು ಮುಖ್ಯವಾಗುತ್ತದೆ ಎಂದರು. ಇತ್ತೀಚಿನ ದಿನಗಳಲ್ಲಿ ಅವರು ಬಾಂಗ್ಲಾದೇಶ, ಬೊಲಿವಿಯಾ ಮತ್ತಿತರ ದೇಶಗಳಿಗೆ ಭೇಟಿ ನೀಡಿದ್ದರು.

ವಿಶ್ವದೆಲ್ಲೆಡೆ ದಿನಾ ನಡೆಯುತ್ತಿರುವುದನ್ನು ನಾವೆಲ್ಲವೂ ಗಮನಿಸಿದ್ದೇವೆ. ಕಳೆದ ದಶಕವು ಅತ್ಯಂತ ಗರಿಷ್ಟ ಉಷ್ಣತೆಯ ದಿನವಾಗಿ ದಾಖಲಾಗಿದೆ. ಆದರೆ ಈಗಲೂ ಕಾಲಮಿಂಚಿಲ್ಲ. ಆದರೆ ಅಪಾಯಕ್ಕೆ ಅತ್ಯಂತ ಸಮೀಪದಲ್ಲಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News