ಕ್ಯಾಲಿಫೋರ್ನಿಯಾ ಕಾಡ್ಗಿಚ್ಚು: 4,63,477 ಎಕರೆ ಅರಣ್ಯ ನಾಶ 3 ಮಂದಿ ನಾಪತ್ತೆ; ಸಾವಿರಾರು ಜನ ಸ್ಥಳಾಂತರ

Update: 2021-08-09 16:56 GMT
photo :PTI 

ವಾಷಿಂಗ್ಟನ್, ಆ.9: ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಭೀಕರವಾಗಿ ಹಬ್ಬಿರುವ ‘ಡಿಕ್ಸೀ ಫೈರ್’ ಕಾಡ್ಗಿಚ್ಚಿನಿಂದ ರವಿವಾರದವರೆಗೆ 4,63,477 ಎಕರೆ ಅರಣ್ಯಪ್ರದೇಶ ಸುಟ್ಟುಹೋಗಿದ್ದು ಮೂರು ಮಂದಿ ನಾಪತ್ತೆಯಾಗಿದ್ದು ಸಾವಿರಾರು ಮಂದಿ ಸುರಕ್ಷಿತ ಪ್ರದೇಶದತ್ತ ಪಲಾಯನ ಮಾಡಿದ್ದಾರೆ . ಅಗ್ನಿಶಾಮಕ ದಳದ ಮೂರು ಸಿಬಂದಿಗಳೂ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಅಮೆರಿಕದ ಇತಿಹಾಸದಲ್ಲೇ 2ನೇ ಅತ್ಯಂತ ಭೀಕರ ಮತ್ತು ವಿನಾಶಕಾರಿ ಕಾಡ್ಗಿಚ್ಟು ಇದಾಗಿದ್ದು ಲಾಸ್ಏಂಜಲೀಸ್ ನಗರಕ್ಕಿಂತಲೂ ವಿಸ್ತಾರವಾದ ಪ್ರದೇಶಕ್ಕೆ ವ್ಯಾಪಿಸಿದೆ. ಕಾಡ್ಗಿಚ್ಚಿನಿಂದ ಸಮಸ್ಯೆ ಎದುರಿಸುತ್ತಿರುವ ಐತಿಹಾಸಿಕ ನಗರ ಗ್ರೀನ್ವಿಲ್ಲೆಗೆ ಶನಿವಾರ ಭೇಟಿ ನೀಡಿದ ಗವರ್ನರ್ ಗ್ಯಾವಿನ್ ನ್ಯೂಸಮ್, ಬೆಂಕಿ ನಂದಿಸಲು ಹೋರಾಡುತ್ತಿರುವ ರಕ್ಷಣಾ ಕಾರ್ಯಕರ್ತರಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದರು. ಹವಾಮಾನ ಬದಲಾವಣೆಯಿಂದ ಸಂಭವಿಸುವ ಕಾಡ್ಗಿಚ್ಚು ಇದಾಗಿದೆ. ಇತ್ತೀಚಿನ ದಿನಗಳಲ್ಲಿ ತೀವ್ರ ಉಷ್ಣತೆಯ ವಾತಾವರಣವಿದೆ. ಮುಂದಿನ ದಿನಗಳಲ್ಲೂ ಇಂತಹ ವಿಪತ್ತು ಎದುರಾಗಬಹುದು. ಆದ್ದರಿಂದ ಅಧಿಕಾರಿಗಳು ಅರಣ್ಯ ರಕ್ಷಣೆ ಹಾಗೂ ಕಾಡ್ಗಿಚ್ಚು ನಿಯಂತ್ರಣ ಕಾರ್ಯಕ್ಕೆ ಸೂಕ್ತ ಸಂಪನ್ಮೂಲಗಳನ್ನು ಕಾಯ್ದಿರಿಸಬೇಕು ಎಂದವರು ಹೇಳಿದ್ದಾರೆ.

ಜುಲೈ 13ರಂದು ಕಾಣಿಸಿಕೊಂಡಿರುವ ಕಾಡ್ಗಿಚ್ಚು ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಕಡಿದಾದ ಪ್ರಪಾತಗಳು, ಗಾಢವಾದ ಹೊಗೆಯಿಂದಾಗಿ ರಕ್ಷಣಾ ಕಾರ್ಯಕರ್ತರು ಹಾಗೂ ಅಗ್ನಿಶಾಮಕ ಸಿಬಂದಿಗಳ ಕಾರ್ಯಾಚರಣೆಗೆ ತೊಡಕಾಗಿದೆ. ಸಾವಿರಾರು ಜನ ಮನೆ ತೊರೆದು ಸುರಕ್ಷಿತ ಪ್ರದೇಶದತ್ತ ಪಲಾಯನ ಮಾಡಿದ್ದು ತಾತ್ಕಾಲಿಕ ಟೆಂಟ್ಗಳಲ್ಲಿ ನೆಲೆಸಿದ್ದಾರೆ. ಆದರೆ ಅಧಿಕಾರಿಗಳ ನಿರಂತರ ಮನವಿಯ ಬಳಿಕವೂ ಕೆಲವರು ಮನೆ ತೊರೆದು ಹೋಗಲು ನಿರಾಕರಿಸಿದ್ದು ತಾವೇ ಸ್ವತಃ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

 ಕಾಡ್ಗಿಚ್ಚು ನಿಯಂತ್ರಣಕ್ಕೆ 5 ಸಾವಿರಕ್ಕೂ ಹೆಚ್ಚು ಸಿಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದು ಕಳೆದ ವಾರ ನಾಪತ್ತೆಯಾಗಿದ್ದ 5 ಮಂದಿಯಲ್ಲಿ ಇಬ್ಬರನ್ನು ಪತ್ತೆಹಚ್ಚಲಾಗಿದೆ. ಉಳಿದ 3 ಮಂದಿಯ ಪತ್ತೆಕಾರ್ಯ ಮುಂದುವರಿದಿದೆ. ಐತಿಹಾಸಿಕ ನಗರ ಗ್ರೀನ್ವಿಲ್ಲೆ ಹಾಗೂ ಸುಮಾರು 400 ಕಟ್ಟಡಗಳು ಬೆಂಕಿಯಿಂದ ಸುಟ್ಟುಹೋಗಿವೆ ಎಂದು ವರದಿಯಾಗಿದೆ.

ಒಣ ಮರವೊಂದು ವಿದ್ಯುತ್ ವಯರ್ನ ಮೇಲೆ ಉರುಳಿಬಿದ್ದು ಬೆಂಕಿ ಹತ್ತಿಕೊಂಡಿರುವುದು ಡಿಕ್ಸೀ ಕಾಡ್ಗಿಚ್ಚು ಆರಂಭವಾಗಲು ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪೆಸಿಫಿಕ್ ಗ್ಯಾಸ್ ಆ್ಯಂಡ್ ಕಂಪೆನಿಗೆ ಎಂಬ ಖಾಸಗಿ ಸಂಸ್ಥೆಗೆ ಸೇರಿದ ವಿದ್ಯುತ್ ವಯರ್ ಇದಾಗಿದೆ. ಈ ಹಿಂದೆ ಇದೇ ಪ್ರದೇಶದಲ್ಲಿ 86 ಮಂದಿಯ ಸಾವಿಗೆ ಕಾರಣವಾದ ಕಾಡ್ಗಿಚ್ಚಿಗೂ ಈ ಸಂಸ್ಥೆಯ ಪ್ರಮಾದ ಕಾರಣ ಎಂಬ ಆರೋಪವಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News