×
Ad

ಕಂದಹಾರ್ ವಶಪಡಿಸಿಕೊಂಡ ತಾಲಿಬಾನ್: ಕಾಬೂಲ್ ಗೆ ಹೆಚ್ಚುವರಿ ಪಡೆ ರವಾನಿಸಿದ ಅಮೆರಿಕ, ಬ್ರಿಟನ್, ಕೆನಡಾ

Update: 2021-08-13 20:04 IST

 ಕಾಬೂಲ್, ಆ.13: ಅಫ್ಘಾನಿಸ್ತಾನದ 2ನೇ ಅತೀ ದೊಡ್ಡ ನಗರ ಕಂದಹಾರ್ ಪ್ರಾಂತವನ್ನು ಶುಕ್ರವಾರ ಕೈವಶಮಾಡಿಕೊಂಡಿರುವ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಮೇಲಿನ ಹಿಡಿತವನ್ನು ಕ್ರಮೇಣ ಬಿಗಿಗೊಳಿಸುತ್ತಿರುವಂತೆಯೇ, ಕಾಬೂಲ್ ನಲ್ಲಿರುವ ರಾಯಭಾರ ಕಚೇರಿಯಿಂದ ಸಿಬಂದಿಗಳ ತೆರವಿಗೆ ಹೆಚ್ಚುವರಿ ಯೋಧರನ್ನು ನಿಯೋಜಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು ನಿರ್ಧರಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರ ದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್ ಮತ್ತು ಪಶ್ಚಿಮ ಭಾಗದ ಹೆರಾತ್ ನಗರಗಳು ತಾಲಿಬಾನ್ ನಿಯಂತ್ರಣಕ್ಕೆ ಬಂದಿರುವುದು ಸರಕಾರಕ್ಕೆ ಆಗಿರುವ ಭಾರೀ ಹಿನ್ನಡೆಯಾಗಿದೆ. ದಕ್ಷಿಣದ ಲಷ್ಕರ್ ಗಾಹ್, ವಾಯವ್ಯದ ಖಲಾ-ಇ-ನಾವ್, ಸೆಂಟ್ರಲ್ ಘೋರ್ ಪ್ರಾಂತ್ಯದ ರಾಜಧಾನಿ ಫಿರೂಝ್ ಕೋಹ್ ಮುಂತಾದ ಹಲವು ಪ್ರಮುಖ ನಗರಗಳು ತಾಲಿಬಾನ್ ಕೈವಶವಾಗಿವೆ. 

ಆಗಸ್ಟ್ 6ರ ಬಳಿಕ ಅಫ್ಘಾನಿಸ್ತಾನದ 34 ಪ್ರಾಂತೀಯ ರಾಜಧಾನಿಗಳ ಪೈಕಿ 14 ತಾಲಿಬಾನ್ ನಿಯಂತ್ರಣಕ್ಕೆ ಬಂದಿದೆ. ಇದೀಗ ಉತ್ತರದ ಮಝರ್-ಇ-ಶರೀಫ್ ಮತ್ತು ಪೂರ್ವದ ಜಲಾಲಾಬಾದ್ ಹಾಗೂ ರಾಜಧಾನಿ ಕಾಬೂಲ್ ಮಾತ್ರ ಸರಕಾರದ ನಿಯಂತ್ರಣದಲ್ಲಿರುವ ಪ್ರಮುಖ ನಗರಗಳಾಗಿವೆ.

ಈ ಮಧ್ಯೆ ತಾಲಿಬಾನ್ ಉಗ್ರರು ಕಾಬೂಲ್ನತ್ತ ಮುಂದುವರಿದಿರುವ ಹಿನ್ನೆಲೆಯಲ್ಲಿ, ಅಲ್ಲಿರುವ ರಾಯಭಾರ ಕಚೇರಿಯಿಂದ ಸಿಬಂದಿಗಳನ್ನು ತೆರವುಗೊಳಿಸಲು 48 ಗಂಟೆಯೊಳಗೆ 3,000 ಹೆಚ್ಚುವರಿ ಯೋಧರನ್ನು ಕಾಬೂಲ್ ಗೆ ರವಾನಿಸುವುದಾಗಿ ಶುಕ್ರವಾರ ಅಮೆರಿಕ ಹೇಳಿದೆ. ತನ್ನ ಪ್ರಜೆಗಳು ಹಾಗೂ ರಾಯಭಾರ ಕಚೇರಿ ಸಿಬಂದಿಗಳನ್ನು ಕಾಬೂಲ್ ನಿಂದ ತೆರವುಗೊಳಿಸಲು ಸುಮಾರು 600 ಯೋಧರನ್ನು ರವಾನಿಸುವುದಾಗಿ ಬ್ರಿಟನ್ ಹೇಳಿದ್ದರೆ, ರಾಯಭಾರ ಕಚೇರಿ ಸಿಬಂದಿಗಳ ತೆರವಿಗೆ ವಿಶೇಷ ಪಡೆ ರವಾನಿಸುವುದಾಗಿ ಕೆನಡಾ ಹೇಳಿದೆ. 90 ದಿನದೊಳಗೆ ತಾಲಿಬಾನ್ ಉಗ್ರರು ಕಾಬೂಲ್ ಅನ್ನು ನಿಯಂತ್ರಣಕ್ಕೆ ಪಡೆಯುವ ಸಾಧ್ಯತೆಯಿರುವುದಾಗಿ ಗುಪ್ತಚರ ವರದಿ ಲಭಿಸಿದೆ ಎಂದು ಕಳೆದ ವಾರ ಅಮೆರಿಕದ ಅಧಿಕಾರಿಗಳು ಹೇಳಿದ್ದರು.

ಇದೀಗ ಹೆರಾತ್ ನಗರ ಭೂತದ ನಗರದಂತೆ ಕಾಣಿಸುತ್ತದೆ. ಇಲ್ಲಿರುವ ಹಲವರು ನಗರ ಬಿಟ್ಟು ತೆರಳಿದ್ದರೆ ಉಳಿದವರು ತಮ್ಮ ಮನೆಯಲ್ಲಿಯೇ ಅಡಗಿ ಕುಳಿತಿದ್ದಾರೆ ಎಂದು ಪ್ರಾಂತೀಯ ಸಮಿತಿ ಸದಸ್ಯ ಗುಲಾಂ ಹಬೀಬ್ ಹಾಶಿಮಿ ದೂರವಾಣಿ ಮೂಲಕ ಮಾಹಿತಿ ನೀಡಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಇರಾನ್ ಗಡಿಭಾಗದ ಬಳಿಯಿರುವ ಹೆರಾತ್ ನಲ್ಲಿ ಸುಮಾರು 6 ಲಕ್ಷ ಜನರಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಆಹಾರವಸ್ತುಗಳ ಕೊರತೆ ಆಘಾತಕಾರಿಯಾಗಿದ್ದು ಈಗಿರುವ ಪರಿಸ್ಥಿತಿ ಮಾನವೀಯ ದುರಂತದ ಸಂಕೇತವಾಗಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಯೋಜನೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.


ಅಫ್ಘಾನ್ ಪಡೆಯ ಕಮಾಂಡರ್ ತಾಲಿಬಾನ್ ವಶದಲ್ಲಿ

 ಈ ಮಧ್ಯೆ, ಸರಕಾರಕ್ಕೆ ಮತ್ತೊಂದು ಆಘಾತ ಎದುರಾಗಿದ್ದು ಹೆರಾತ್ ನಗರಕ್ಕೆ ಮುತ್ತಿಗೆ ಹಾಕಿದ್ದ ತಾಲಿಬಾನ್ ಗಳು ಅಫ್ಘಾನ್ ನ ಹಿರಿಯ ಕಮಾಂಡರ್, ತಾಲಿಬಾನ್ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿದ್ದ ಉನ್ನತ ಅಧಿಕಾರಿ ಮುಹಮ್ಮದ್ ಇಸ್ಮಾಯಿಲ್ ಖಾನ್ ರನ್ನು ತಮ್ಮ ವಶಕ್ಕೆ ಪಡೆದಿವೆ ಎಂದು ಹೆರಾತ್ ಪ್ರಾಂತ್ಯದ ಅಧಿಕಾರಿಗಳು ಹೇಳಿದ್ದಾರೆ.

ಖಾನ್ ತಮ್ಮ ವಶದಲ್ಲಿರುವುದನ್ನು ದೃಢಪಡಿಸಿರುವ ತಾಲಿಬಾನ್ ವಕ್ತಾರರು, ಖಾನ್ ಸಹಿತ ತಮ್ಮ ವಶದಲ್ಲಿರುವ ಹಲವು ಅಧಿಕಾರಿಗಳಿಗೆ ಯಾವುದೇ ಹಾನಿ ಎಸಗುವುದಿಲ್ಲ ಎಂದು ಭರವಸೆ ನೀಡಿರುವುದಾಗಿ ವರದಿಯಾಗಿದೆ.

ಅಫ್ಘಾನ್ ನಿಂದ ಅಮೆರಿಕ ಸೇನೆ ವಾಪಸಾತಿ ಒಂದು ದೊಡ್ಡ ಪ್ರಮಾದ: ಬ್ರಿಟನ್

ಅಪಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆಯುವ ಅಮೆರಿಕದ ನಿರ್ಧಾರ ಬಲುದೊಡ್ಡ ಪ್ರಮಾದವಾಗಿದ್ದು ಈ ಉಪಕ್ರಮ ಅತೀ ದೊಡ್ಡ ಸಮಸ್ಯೆ ಸೃಷ್ಟಿಸುವ ಜೊತೆಗೆ, ಇದುವರೆಗೆ ಅಲ್ಲಿ ಸಾಧಿಸಿದ್ದ ಮುನ್ನಡೆಯನ್ನು ತಾಲಿಬಾನ್ಗೆ ಹಸ್ತಾಂತರಿಸಿದಂತಾಗಿದೆ ಎಂದು ಬ್ರಿಟನ್ ಖಾರವಾಗಿ ಪ್ರತಿಕ್ರಿಯಿಸಿದೆ. ತಾಲಿಬಾನ್ ಗಳ ಪುನರುಜ್ಜೀವನವು ವಿಶ್ವಕ್ಕೇ ಭೀತಿಯೊಡ್ಡಿರುವ ಉಗ್ರವಾದಿಗಳ ತಳಿವರ್ಧಕ ನೆಲೆ ರೂಪುಗೊಳ್ಳಲು ಕಾರಣವಾಗಲಿದೆ ಎಂದು ಬ್ರಿಟನ್ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಬೆನ್ ವ್ಯಾಲೇಸ್ ಎಚ್ಚರಿಸಿದ್ದಾರೆ. 

ಈ ಹಿಂದೆ ತಾಲಿಬಾನ್ ಆಶ್ರಯದಲ್ಲಿ ನೆಲೆ ಕಂಡುಕೊಂಡಿದ್ದ ಅಲ್ಖೈದಾ ಉಗ್ರರಿಗೆ ಅಫ್ಘಾನ್ ಮತ್ತೊಮ್ಮೆ ಸ್ವರ್ಗವಾಗುವ ಸಾಧ್ಯತೆಯಿದೆ. ಈ ರೀತಿಯ ಜನರ ತಳಿವರ್ಧಕ ತಾಣವಾಗಿ ಅಫ್ಘಾನ್ ರೂಪುಗೊಳ್ಳಬಹುದು ಎಂಬ ಆತಂಕವಿದೆ. ಅಲ್ ಖೈದಾ ಮತ್ತೆ ಅಫ್ಘಾನಿಸ್ತಾನಕ್ಕೆ ಮರಳುವ ಸಾಧ್ಯತೆ ಹೆಚ್ಚಿದ್ದು, ಹೀಗಾದರೆ ಇದು ನಮಗೆ ಹಾಗೂ ನಮ್ಮ ಹಿತಾಸಕ್ತಿಗಳಿಗೆ ಎದುರಾಗುವ ಬಲುದೊಡ್ಡ ಭದ್ರತಾ ಆತಂಕವಾಗಿದೆ . ಕಳೆದ ವರ್ಷ ಅಮೆರಿಕ ಅಧ್ಯಕ್ಷರಾಗಿದ್ದ ಟ್ರಂಪ್ ಮತ್ತು ತಾಲಿಬಾನ್ ಮಧ್ಯೆ ದೋಹಾದಲ್ಲಿ ನಡೆದ ಒಪ್ಪಂದ ಒಂದು ಪ್ರಮಾದವಾಗಿದ್ದು ಇದರ ಪರಿಣಾಮ ಅಂತರಾಷ್ಟ್ರೀಯ ಸಮುದಾಯದ ಮೇಲಾಗಲಿದೆ. ಒಪ್ಪಂದದ ಬಳಿಕ ಸೇನೆ ಹಿಂಪಡೆಯದೆ ಬ್ರಿಟನ್ ಗೆ ಬೇರೆ ಆಯ್ಕೆಯೇ ಇರಲಿಲ್ಲ ಎಂದು ವ್ಯಾಲೇಸ್ ಹೇಳಿದ್ದಾರೆ.

ಬಲಪ್ರಯೋಗಿಸಿ ಸ್ಥಾಪಿಸುವ ಸರಕಾರಕ್ಕೆ ಮಾನ್ಯತೆ ನೀಡದಿರಲು 12 ದೇಶಗಳ ನಿರ್ಧಾರ

ಬಂದೂಕಿನ ನಳಿಕೆಯ ಮೂಲಕ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸುವ ಯಾವುದೇ ಸರಕಾರಕ್ಕೆ ಮಾನ್ಯತೆ ನೀಡದಿರಲು ಅಮೆರಿಕ, ಭಾರತ, ಚೀನಾ ಸಹಿತ 12 ದೇಶಗಳು ಹಾಗೂ ಯುರೋಪಿಯನ್ ಯೂನಿಯನ್ ಮತ್ತು ವಿಶ್ವಸಂಸ್ಥೆ ಪ್ರತಿನಿಧಿಗಳು ನಿರ್ಧರಿಸಿದ್ದಾರೆ ಎಂದು ಅಮೆರಿಕದ ಗೃಹ ಇಲಾಖೆ ಶುಕ್ರವಾರ ಹೇಳಿದೆ.

ಅಫ್ಘಾನಿಸ್ತಾನದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಹತೋಟಿಯಲ್ಲಿಡುವ ಕ್ರಮಗಳ ಬಗ್ಗೆ ಚರ್ಚಿಸಲು ಗುರುವಾರ ನಡೆದ ಪ್ರಾದೇಶಿಕ ಸಮ್ಮೇಳನದಲ್ಲಿ ಅಮೆರಿಕ, ಖತರ್, ವಿಶ್ವಸಂಸ್ಥೆ, ಚೀನಾ, ಉಜ್ಬೇಕಿಸ್ತಾನ, ಪಾಕಿಸ್ತಾನ, ಬ್ರಿಟನ್, ಯುರೋಪಿಯನ್ ಯೂನಿಯನ್, ಜರ್ಮನಿ, ಭಾರತ, ನಾರ್ವೆ, ತಜಿಕಿಸ್ತಾನ, ಟರ್ಕಿ ಮತ್ತು ಟರ್ಕ್ಮೆನಿಸ್ತಾನ್ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. 

ಖತರ್ನ ಆಶ್ರಯದಲ್ಲಿ ನಡೆದ ಈ ಸಮ್ಮೇಳನದಲ್ಲಿ ಶಾಂತಿ ಮಾತುಕತೆ ಮುಂದುವರೆಯಲು ಮೊದಲ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಸೇನಾ ಶಕ್ತಿಯಿಂದ ಅಧಿಕಾರದಲ್ಲಿ ಪ್ರತಿಷ್ಟಾಪನೆಯಾಗುವ ಯಾವುದೇ ಸರಕಾರಕ್ಕೂ ಮಾನ್ಯತೆ ನೀಡದಿರಲೂ ನಿರ್ಧರಿಸಲಾಗಿದೆ. ಇದು ಕೇವಲ ಅಮೆರಿಕದ ಧ್ವನಿಯಲ್ಲ. ಅಂತಾರಾಷ್ಟ್ರೀಯ ಸಮುದಾಯದ ಧ್ವನಿಯಾಗಿದೆ ಎಂದು ಅಮೆರಿಕ ಗೃಹ ಇಲಾಖೆ ವಕ್ತಾರ ನೆಡ್ ಪ್ರೈಸ್ ಗುರುವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News