×
Ad

ಜರ್ಮನಿಯ ಫುಟ್ಬಾಲ್ ದಂತಕತೆ ಗೆರ್ಡ್ ಮುಲ್ಲರ್ ನಿಧನ

Update: 2021-08-15 18:11 IST
photo: twitter

ಮ್ಯಾಡ್ರಿಡ್, ಆ.15: ಜರ್ಮನಿಯ ಫುಟ್ಬಾಲ್ ದಂತಕತೆ ಗೆರ್ಡ್ ಮುಲ್ಲರ್ ರವಿವಾರ ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು ಎಂದು ಬೆಯರ್ನ್ ಮ್ಯೂನಿಕ್‌ ಫುಟ್ಬಾಲ್ ಕ್ಲಬ್ ರವಿವಾರ ದೃಢಪಡಿಸಿದೆ.

ತಮ್ಮ ಯಶಸ್ವಿ ವೃತ್ತಿಜೀವನದಲ್ಲಿ ಸ್ಟ್ರೈಕರ್ ಮುಲ್ಲರ್ ಅವರು ಬೆಯರ್ನ್ ಪರ 15 ವರ್ಷಗಳ ಅವಧಿಯಲ್ಲಿ 607 ಸ್ಪರ್ಧಾತ್ಮಕ ಪಂದ್ಯಗಳಲ್ಲಿ 566 ಗೋಲುಗಳನ್ನು ಗಳಿಸಿದ್ದರು. ಬುಂಡೆಸ್ಲಿಗಾದಲ್ಲಿ ದಾಖಲೆ 365 ಗೋಲುಗಳನ್ನು ದಾಖಲಿಸಿರುವ ಮುಲ್ಲರ್ ಅವರು ಬೆಯರ್ನ್‌ಗೆ 4 ಲೀಗ್ ಪ್ರಶಸ್ತಿಗಳು, 4 ಡಿಎಫ್‌ಬಿ ಕಪ್ ಹಾಗೂ 3 ಯುರೋಪಿಯನ್ ಕಪ್‌ಗಳನ್ನು ಗೆದ್ದುಕೊಟ್ಟಿದ್ದರು.

ವೆಸ್ಟ್ ಜರ್ಮನಿ ಪರವಾಗಿ 62 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿರುವ ಮುಲ್ಲರ್ ಒಟ್ಟು 68 ಬಾರಿ ಗೋಲುಗಳನ್ನು ಗಳಿಸಿದ್ದರು. ಇದರಲ್ಲಿ 1974ರ ವಿಶ್ವಕಪ್ ಫೈನಲ್ ಗೆಲುವಿನ ಗೋಲು ಕೂಡ ಸೇರಿದೆ. 1970ರ ವಿಶ್ವಕಪ್‌ನಲ್ಲಿ ಒಟ್ಟು 10 ಗೋಲುಗಳನ್ನು ಗಳಿಸಿ ಗೋಲ್ಡನ್ ಬೂಟ್ ಪ್ರಶಸ್ತಿಗೆ ಭಾಜನರಾಗಿದ್ದ ಮುಲ್ಲರ್ ಅದೇ ವರ್ಷ ಬ್ಯಾಲನ್ ಡಿ’ಒರ್ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ವಿಶ್ವಕಪ್‌ನಲ್ಲಿ ಒಟ್ಟು 14 ಗೋಲುಗಳನ್ನು ಗಳಿಸಿರುವ ಮುಲ್ಲರ್ ಅವರು ರೊನಾಲ್ಡೊ(15) ಹಾಗೂ ಮಿರೊಸ್ಲಾವ್ ಕ್ಲೋಸ್(16) ಬಳಿಕ ಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಜರ್ಮನಿ ಪರ 1972ರಲ್ಲಿ ಯುರೋಪಿಯನ್ ಚಾಂಪಿಯನ್ ಶಿಪ್‌ನ್ನು ಗೆದ್ದುಕೊಂಡಿದ್ದರು.

ಇಂದು ಬೆಯರ್ನ್ ಎಫ್‌ಸಿ ಹಾಗೂ ಫುಟ್ಬಾಲ್ ಅಭಿಮಾನಿಗಳಿಗೆ ದುಃಖದ ಹಾಗೂ ಕಪ್ಪುದಿನವಾಗಿದೆ ಎಂದು ಬೆಯರ್ನ್ ಅಧ್ಯಕ್ಷ ಹೆರ್ಬರ್ಟ್ ಹೈನೆರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News