ಅಫ್ಘಾನಿಸ್ತಾನದಿಂದ ಯಾವುದೇ ದೇಶಕ್ಕೆ ಯಾವ ಅಪಾಯವೂ ಇಲ್ಲ:ತಾಲಿಬಾನ್
ಹೊಸದಿಲ್ಲಿ: ಅಫ್ಘಾನಿಸ್ತಾನದಿಂದ ಯಾವುದೇ ದೇಶಕ್ಕೆ ಯಾವುದೇ ರೀತಿಯ ಬೆದರಿಕೆಯಿಲ್ಲ ಎಂದು ತಾಲಿಬಾನ್ ಮಂಗಳವಾರ ಘೋಷಿಸಿದೆ.
."ಅಫ್ಘಾನಿಸ್ತಾನದಿಂದ ಯಾವುದೇ ದೇಶಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದು ಇಸ್ಲಾಮಿಕ್ ಎಮಿರೇಟ್ ವಿಶ್ವದ ಎಲ್ಲಾ ದೇಶಗಳಿಗೆ ಪ್ರತಿಜ್ಞೆ ಮಾಡುತ್ತಿದೆ" ಎಂದು ತಾಲಿಬಾನ್ ವಕ್ತಾರ ಝಬೀಹುಲ್ಲಾ ಮುಜಾಹಿದ್ ಕಾಬೂಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಅಫ್ಘಾನಿಸ್ತಾನದಲ್ಲಿ ಶೀಘ್ರದಲ್ಲೇ ಇಸ್ಲಾಮಿಕ್ ಸರಕಾರವನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದರು.
"ನಾವು ಯಾರೊಂದಿಗೂ ದ್ವೇಷವನ್ನು ಹೊಂದಿಲ್ಲ ಹಾಗೂ ನಮ್ಮ ನಾಯಕನ ಆದೇಶದ ಮೇರೆಗೆ ನಾವು ಎಲ್ಲರಿಗೂ ಕ್ಷಮೆಯನ್ನು ನೀಡಿದ್ದೇವೆ" ಎಂದು ಅವರು ಹೇಳಿದರು.
ಮಾಜಿ ಸೇನಾ ಸದಸ್ಯರು ಹಾಗೂ ವಿದೇಶಿ ಪಡೆಗಳೊಂದಿಗೆ ಕೆಲಸ ಮಾಡಿದವರು ಸೇರಿದಂತೆ ಯಾರ ವಿರುದ್ಧವೂ ಪ್ರತೀಕಾರ ಇರುವುದಿಲ್ಲ. ಅವರ ಮನೆಯನ್ನು ಯಾರೂ ಹುಡುಕುವುದಿಲ್ಲ. ಜನರ ಮೌಲ್ಯಗಳಿಗೆ ಹೊಂದಿಕೆಯಾಗುವ ನಿಯಮಗಳನ್ನು ಅನ್ವಯಿಸುವ ಹಕ್ಕನ್ನು ಆಫ್ಘನ್ನರು ಹೊಂದಿದ್ದಾರೆ. ಆದ್ದರಿಂದ ಇತರ ದೇಶಗಳು ಈ ನಿಯಮಗಳನ್ನು ಗೌರವಿಸಬೇಕು ಎಂದರು.
ಮಹಿಳೆಯರ ವಿರುದ್ಧ ಯಾವುದೇ ತಾರತಮ್ಯ ಇರುವುದಿಲ್ಲ ಎಂದು ಪ್ರತಿಪಾದಿಸಿದ ತಾಲಿಬಾನ್ ವಕ್ತಾರ, ಇಸ್ಲಾಂ ಆಧಾರದ ಮೇಲೆ ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ಒದಗಿಸಲು ಬದ್ಧರಾಗಿರುವುದಾಗಿ ಹೇಳಿದರು. ಮಹಿಳೆಯರು ಆರೋಗ್ಯ ಕ್ಷೇತ್ರ ಹಾಗೂ ಅವರಿಗೆ ಅಗತ್ಯವಿರುವ ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು ಎಂದು ಹೇಳಿದರು.