ಶಾಂತಿಯುತ ಪರಮಾಣು ಕಾರ್ಯಕ್ರಮಕ್ಕೆ ಬದ್ಧ: ಇರಾನ್ ಪುನರುಚ್ಚಾರ

Update: 2021-08-18 18:24 GMT

ಟೆಹ್ರಾನ್, ಆ.18: ಇರಾನ್ ಅತ್ಯಂತ ಶಕ್ತಿಶಾಲಿ ಯುರೇನಿಯಂ ಉತ್ಪಾದನೆ ಕಾರ್ಯವನ್ನು ತ್ವರಿತಗೊಳಿಸಿದೆ ಎಂಬ ವಿಶ್ವಸಂಸ್ಥೆಯ ಕಾವಲುಸಮಿತಿ ವರದಿಯ ಬಳಿಕ ಹೇಳಿಕೆ ನೀಡಿರುವ ಇರಾನ್, ತನ್ನ ಪರಮಾಣು ಕಾರ್ಯಕ್ರಮ ಶಾಂತಯುತ ಕಾರ್ಯಗಳನ್ನು ಮಾತ್ರ ಉದ್ದೇಶಿಸಿದ್ದು ಬಾಧ್ಯತೆಗಳ ನಿರ್ವಹಣೆಗೆ ಬದ್ಧ ಎಂದು ಒತ್ತಿಹೇಳಿದೆ. ಇರಾನ್‌ನ ನಟಾಂಝ್ ಸಂವರ್ಧನ ಸ್ಥಾವರದಲ್ಲಿ ಯುರೇನಿಯಂ ಸಂವರ್ಧನ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗಿದೆ ಎಂದು ಅಂತರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿ(ಐಎಇಎ)ಯ ನಿರ್ದೇಶಕ ರಫೇಲ್ ಗ್ರಾಸ್ ದೃಢಪಡಿಸಿದ್ದರು.

ಆ ಬಳಿಕ ಹೇಳಿಕೆ ನೀಡಿರುವ ಇರಾನ್‌ನ ವಿದೇಶಿ ಇಲಾಖೆಯ ವಕ್ತಾರ ಸಯೀದ್ ಖತೀಬ್ಜಾದೆ, ಇರಾನ್‌ನ ಪರಮಾಣು ಕಾರ್ಯಕ್ರಮ ಹಾಗೂ ಚಟುವಟಿಕೆಗಳು ಪ್ರಸರಣ ರಹಿತ ಒಪ್ಪಂದಕ್ಕೆ ಅನುಗುಣವಾಗಿದೆ. ಐಎಇಎ ನಿಗಾದಡಿ ಮತ್ತು ಈ ಹಿಂದೆ ಘೋಷಿಸಿದಂತೆ ಇರಾನ್ ತನ್ನ ಹೇಳಿಕೆಗಳಿಗೆ ಬದ್ಧವಾಗಿದೆ ಎಂದು ಘೋಷಿಸಿದ್ದಾರೆ. ಅಮೆರಿಕ ಹಾಗೂ ಇತರ ಪಕ್ಷಗಳು ಜಂಟಿ ಸಮಗ್ರ ಯೋಜನೆಯಡಿ ರೂಪಿಸಲಾದ ನಿರ್ಧಾರಗಳನ್ನು ಸಂಪೂರ್ಣವಾಗಿ ಮತ್ತು ಬೇಷರತ್ ಆಗಿ ಜಾರಿಗೊಳಿಸುವ ತನಕ, ತನ್ನ ಅಗತ್ಯತೆ, ಸಾರ್ವಭೌಮ ನಿರ್ಧಾರಗಳು ಹಾಗೂ ಬಾಧ್ಯತೆಯನ್ನು ರಕ್ಷಿಸುವ ಪರಿಧಿಯೊಳಗೆ, ಶಾಂತರೀತಿಯ ಪರಮಾಣು ಕಾರ್ಯಕ್ರಮವನ್ನು ಇರಾನ್ ಮುಂದುವರಿಸಲಿದೆ ಎಂದು ಖತೀಬ್ಜಾದೆ ಹೇಳಿದ್ದಾರೆ. 60%ದಷ್ಟು ಸಂಸ್ಕರಿಸಿದ ಯುರೇನಿಯಂ ಅನ್ನು ಉತ್ಪಾದಿಸುವ ಪ್ರಕ್ರಿಯೆಗೆ ಇರಾನ್ ಎಪ್ರಿಲ್ ಮಧ್ಯಭಾಗದಲ್ಲಿ ಚಾಲನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News