ನೆರೆದೇಶಗಳ ವಿರುದ್ಧ ದುಷ್ಕೃತ್ಯಕ್ಕೆ ಅಫ್ಘಾನ್ ನೆಲ ಬಳಸಲು ಅವಕಾಶವಿಲ್ಲ: ಅಂತಾರಾಷ್ಟ್ರೀಯ ಮಾನ್ಯತೆಗೆ ತಾಲಿಬಾನ್ ಆಗ್ರಹ

Update: 2021-08-20 17:58 GMT

ಬೀಜಿಂಗ್, ಆ.20: ತನ್ನ ವಿರುದ್ಧ ಸ್ವದೇಶದಲ್ಲಿ ಹಾಗೂ ವಿದೇಶದಲ್ಲಿ ಅಸಮಾಧಾನ ಹೆಚ್ಚುತ್ತಿರುವ ಬೆನ್ನಲ್ಲೇ ತನಗೆ ಮಾನ್ಯತೆ ನೀಡಬೇಕೆಂದು ತಾಲಿಬಾನ್ ಅಂತಾರಾಷ್ಟ್ರೀಯ ಸಮುದಾಯವನ್ನು ಶುಕ್ರವಾರ ಆಗ್ರಹಿಸಿದೆ. ತನ್ನ ಆಳ್ವಿಕೆಯಡಿಯಲ್ಲಿ ಅಫ್ಘಾನಿಸ್ತಾನದಲ್ಲಿ ಚೀನಾವು ಮಹತ್ತರವಾದ ಪಾತ್ರವನ್ನು ವಹಿಸಬಹುದಾಗಿದೆ ಎಂದೂ ಅದು ತಿಳಿಸಿದೆ.

ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್ ಶುಕ್ರವಾರ ಚೀನ ಸರಕಾರಿ ಸ್ವಾಮ್ಯದ ಸುದ್ದಿವಾಹಿನಿ ಸಿಜಿಟಿಎನ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ಅಂತಾರಾಷ್ಟ್ರೀಯ ಸಮುದಾಯವು ಅಫ್ಘಾನ್ ಜನತೆಯ ಇಚ್ಛೆಯನ್ನು ಗೌರವಿಸಬೇಕೆಂದು ತಿಳಿಸಿದೆ.20 ವರ್ಷಗಳ ಹಿಂದೆ ತನ್ನ ಆಡಳಿತಾವಧಿಯಲ್ಲ ಮಾಡಿದಂತೆ ಈಗಲೂ ತಾಲಿಬಾನ್ , ದೇಶದಲ್ಲಿ ಶರಿಯಾ ಕಾನೂನನ್ನು ಜಾರಿಗೊಳಿಸುವ ಯೋಜನೆ ಹೊಂದಿದೆ ಆಗೂ ಮಹಿಳೆಯರ ಸ್ವಾತಂತ್ರನ್ನು ಮೊಟಕುಗೊಳಿಸಲಿದೆ ಎಂಬ ಆತಂಕಗಳ ಬಗ್ಗೆ ಸಂದರ್ಶಕರ ಪ್ರಶ್ನೆಗೆ ಉತ್ತರಿಸಿದ ಶಾಹೀನ್, ಅಫ್ಘಾನಿಸ್ತಾನದ ನೂತನ ತಾಲಿಬಾನ್ ಸರಕಾರವು ಮಹಿಳೆಯರ ಶಿಕ್ಷಣದ ಹಾಗೂ ಕೆಲಸದ ಹಕ್ಕುಗಳನ್ನು ರಕ್ಷಿಸಲಿದೆ ಎಂದು ತಿಳಿಸಿದ್ದಾರೆೆ.
ನೂತನ ಸರಕಾರಕ್ಕೆ ಹಣಕಾಸು ನಿಧಿಯನ್ನು ಬಿಡುಗಡೆಗೊಳಿಸುವಂತೆಯೂ ಅವರು ಅಂತಾರಾಷ್ಟ್ರೀಯ ಹಣಕಾಸು ಸಂಘಟನೆಗಳನ್ನು ಆಗ್ರಹಿಸಿದ್ದಾರೆ. ಪಾಕಿಸ್ತಾನದ ಜೊತೆ ನಿಕಟವಾದ ಬಾಂಧವ್ಯವನ್ನು ಬೆಳೆಸಲು ಇಚ್ಛಿಸುತ್ತಿದೆ ಎಂದು ಶಾಹೀನ್ ತಿಳಿಸಿದರು.

ಕಳೆದ ಕೆಲವು ವರ್ಷಗಳಲ್ಲಿ ನಾವು ಚೀನಾ ಹಾಗೂ ರಶ್ಯದ ಜೊತೆ ಬಾಂಧವ್ಯವನ್ನು ಬೆಳೆಸಿದ್ದು, ಅಫ್ಘಾನಿಸ್ತಾನದ ಬಗ್ಗೆ ಅವರು ಯಾವುದೇ ಆತಂಕವನ್ನು ಹೊಂದಬಾರದೆಂದು ನಾವು ಅವರಿಗೆ ತಿಳಿಸಿರುವುದಾಗಿ ಶಾಹೀನ್ ಹೇಳಿದ್ದಾರೆ.
ನಮ್ಮ ನೆಲದ ಮಣ್ಣನ್ನು ನಮ್ಮ ನೆರೆಹೊರೆಯ ದೇಶಗಳ ವಿರುದ್ಧ ಬಳಸುವುದಕ್ಕೆ ಅವಕಾಶ ನೀಡುವುದಿಲ್ಲ. ಇದು ನಮಗೆ ಮುಖ್ಯವಾಗಿದೆ ಎಂದರು.
ನೆರೆರಾಷ್ಟ್ರಗಳು, ಅಮೆರಿಕ ಹಾಗೂ ಜಗತ್ತಿನ ಇತರ ದೇಶಗಳು ಸೇರಿದಂತೆ ಅಫ್ಘಾನಿಸ್ತಾನದ ಪುನರ್ನಿರ್ಮಾಣದಲ್ಲಿ ನಮಗೆ ಎಲ್ಲಾ ದೇಶಗಳ ನೆರವಿನ ಅಗತ್ಯವಿದೆಯೆಂದು ಶಾಹೀನ್ ತಿಳಿಸಿದರು.

ತಾಲಿಬಾನ್ ಆಳ್ವಿಕೆಯ ಹಿನ್ನೆಲೆಯಲ್ಲಿ ದೇಶದಿಂದ ಪರಾರಿಯಾಗಲು ಸಾವಿರಾರು ಹತಾಶ ಅಫ್ಘಾನ್ನರು ಕಾಬೂಲ್ ವಿಮಾನನಿಲ್ದಾಣಕ್ಕೆ ಧಾವಿಸಿದ್ದರಿಂದ ಕೋಲಾಹಲ ಉಂಟಾದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಾಬೂಲ್ನಿಂದ ವಿಮಾನವನ್ನು ಏರಿದಲ್ಲಿ ಅಮೆರಿಕ ಅಥವಾ ಬ್ರಿಟನ್ನಲ್ಲಿ ನೆಲೆಸಲು ಅವಕಾಶ ದೊರೆಯಲಿದೆಯೆಂಬ ವದಂತಿಯನ್ನು ನಂಬಿ ಜನರು ತಪ್ಪುದಾರಿಗೆಳೆಯಲ್ಪಟ್ಟಿದ್ದರು ಎಂದವರು ತಿಳಿಸಿದರು.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮುನ್ನಡೆಯು ಹೇರಿಕೆಯಾಗಿದ್ದ ಆಡಳಿತದ ವಿರುದ್ಧ ನಡೆದ ಜನತಾ ಬಂಡಾಯವಾಗಿದೆ ಎಂದು ಶಾಹೀನ್ ಪ್ರತಿಪಾದಿಸಿದರು.

ಅಫ್ಘಾನ್ನಲ್ಲಿ ಚುನಾವಣೆ ಪ್ರಕ್ರಿಯೆ ಸಾಧ್ಯತೆಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಭವಿಷ್ಯದಲ್ಲಿ ಅದನ್ನು ತಳ್ಳಿಹಾಕುವಂತಿಲ್ಲ ಎಂದರು. ಮಹಿಳೆಯರು ಶಿಕ್ಷಣವನ್ನು ಮುಂದುವರಿಸಲಿಕ್ಕೆ ತಾಲಿಬಾನ್ ಅನುಮತಿ ನೀಡಲಿದೆ ಎಂದು ಹೇಳಿದ ಅವರು ವಿದೇಶಿ ಶಕ್ತಿಗಳ ಜೊತೆ ಕೆಲಸ ಮಾಡಿದವರನ್ನು ಶಿಕ್ಷಿಸಲಾಗುವುದಿಲ್ಲವೆಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News