ಅಫ್ಘಾನಿಸ್ತಾನವನ್ನು ತೊರೆದ ಮಹಿಳಾ ಫುಟ್ಬಾಲ್ ಆಟಗಾರ್ತಿಯರು
ಕಾಬೂಲ್, ಆ.24: ಅಫ್ಘಾನಿಸ್ತಾನ ಮಹಿಳಾ ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರ್ತಿಯರು ಮಂಗಳವಾರ "ಮಹತ್ವದ ಗೆಲುವು" ಸಾಧಿಸಿದ್ದು, ಅವರು ಕಾಬೂಲ್ ನಿಂದ ವಿಮಾನದಲ್ಲಿ ಸ್ಥಳಾಂತರಿಸಿದ 75 ಕ್ಕೂ ಹೆಚ್ಚು ಜನರ ಗುಂಪಿನಲ್ಲಿದ್ದರು.
ಆಟಗಾರರು, ತಂಡದ ಅಧಿಕಾರಿಗಳು ಹಾಗೂ ಕುಟುಂಬ ಸದಸ್ಯರ ಸ್ಥಳಾಂತರವನ್ನು ಸಾಧ್ಯವಾಗಿಸಿದ್ದಕ್ಕೆ ಜಾಗತಿಕ ಫುಟ್ಬಾಲ್ ಆಟಗಾರರ ಒಕ್ಕೂಟ FIFPRO ಆಸ್ಟ್ರೇಲಿಯಾ ಸರಕಾರಕ್ಕೆ ಧನ್ಯವಾದ ಅರ್ಪಿಸಿತು.
"ಇಂತಹ ಯುವ ಕ್ರೀಡಾಳುಗಳ ಜೀವ ಅಪಾಯದ ಸ್ಥಿತಿಯಲ್ಲಿದೆ. ಅವರ ನೆರವಿಗೆ ಬಂದಿದ್ದಕ್ಕಾಗಿ ಅಂತರಾಷ್ಟ್ರೀಯ ಸಮುದಾಯಕ್ಕೆ ನಾವು ಧನ್ಯವಾದ ಸಲ್ಲಿಸುತ್ತೇವೆ" ಎಂದು ಯೂನಿಯನ್ ಹೇಳಿಕೆಯಲ್ಲಿ ತಿಳಿಸಿದೆ.
2007 ರಲ್ಲಿ ಅಫ್ಘಾನ್ ಮಹಿಳಾ ಫುಟ್ಬಾಲ್ ತಂಡವನ್ನು ರಚಿಸಲಾಯಿತು.
"ಕಳೆದ ಕೆಲವು ದಿನಗಳು ಅತ್ಯಂತ ಒತ್ತಡದಿಂದ ಕೂಡಿದ್ದವು. ಆದರೆ ಇಂದು ನಾವು ಮಹತ್ವದ ವಿಜಯವನ್ನು ಸಾಧಿಸಿದ್ದೇವೆ. ಮಹಿಳಾ ಫುಟ್ಬಾಲ್ ಆಟಗಾರ್ತಿಯರು ಬಿಕ್ಕಟ್ಟಿನ ಸಮಯದಲ್ಲಿ ಧೈರ್ಯಶಾಲಿ ಹಾಗೂ ಬಲಶಾಲಿಯಾಗಿದ್ದಾರೆ. ಅವರು ಅಫ್ಘಾನಿಸ್ತಾನದ ಹೊರಗೆ ಉತ್ತಮ ಜೀವನವನ್ನು ಹೊಂದುತ್ತಾರೆ ಎಂದು ನಾವು ಭಾವಿಸುತ್ತೇವೆ" ಎಂದು ತಂಡದ ಮಾಜಿ ನಾಯಕಿ ಖಾಲಿದಾ ಪೋಪಾಲ್ ಹೇಳಿದರು.