ಕ್ಯಾಲಿಫೋರ್ನಿಯಾ: ಭೀಕರ ಕಾಡ್ಗಿಚ್ಚಿಗೆ 756 ಚದರ ಕಿ.ಮೀ ಅರಣ್ಯ ನಾಶ; ಸಾವಿರಾರು ಮಂದಿಯ ಸ್ಥಳಾಂತರ

Update: 2021-08-31 15:36 GMT
[FILE PHOTO] photo: PTI 

ಕ್ಯಾಲಿಫೋರ್ನಿಯಾ, ಆ.31: ಕ್ಯಾಲಿಫೋರ್ನಿಯಾದ ಸೌತ್ಲೇಕ್ ತಾಹೊ ನಗರದ ಬಳಿಯ ಅರಣ್ಯದಲ್ಲಿ ಆಗಸ್ಟ್ 14ರಂದು ಕಾಣಿಸಿಕೊಂಡ ಕಾಡ್ಗಿಚ್ಚು ಕ್ರಮೇಣ ನಗರಪ್ರದೇಶದತ್ತ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದುವರೆಗೆ ಸುಮಾರು 256 ಚದರ ಕಿ.ಮೀ ಅರಣ್ಯ ಬೆಂಕಿಯಿಂದ ಸುಟ್ಟುಹೋಗಿದ್ದು 600ಕ್ಕೂ ಹೆಚ್ಚು ಕಟ್ಟಡಗಳಿಗೆ ಹಾನಿಯಾಗಿದೆ. ಇನ್ನೂ 2000 ಕಟ್ಟಡಗಳು ಅಪಾಯದ ಅಂಚಿನಲ್ಲಿವೆ. ಈ ಮಧ್ಯೆ ಕ್ಯಾಲಿಫೋರ್ನಿಯಾದ ಪಕ್ಕದಲ್ಲಿರುವ ನೆವಾಡದಲ್ಲಿ ಸೋಮವಾರ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಮೂಲಗಳು ಹೇಳಿವೆ.

ರೆಸಾರ್ಟ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಸೌತ್ಲೇಕ್ ತಾಹೊದಲ್ಲಿ ಬೇಸಿಗೆ ರಜೆಯ ಮೋಜಿಗಾಗಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದರು. ಕಾಡ್ಗಿಚ್ಚಿನ ಹಿನ್ನೆಲೆಯಲ್ಲಿ ತಕ್ಷಣ ನಗರದಿಂದ ತೆರಳುವಂತೆ ಘೋಷಣೆ ಹೊರಡಿಸಿದ ಬೆನ್ನಲ್ಲೇ ರಸ್ತೆ, ಹೆದ್ದಾರಿಗಳಲ್ಲಿ ವಾಹನಗಳ ಸಾಲು ಬೆಳೆದು ಟ್ರಾಫಿಕ್ ಜ್ಯಾಂ ಉಂಟಾಗಿದೆ. ನೆವಾಡದ ನಿವಾಸಿಗಳಿಗೂ ಸ್ಥಳಾಂತರಕ್ಕೆ ಸಿದ್ಧವಾಗಿರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಸೌತ್ ಲೇಕ್ ತಾಹೊದ ಪ್ರಮುಖ ಆಸ್ಪತ್ರೆ ‘ಬಾರ್ಟನ್ ಮೆಮೋರಿಯಲ್ ಹಾಸ್ಟಿಟಲ್’ನಲ್ಲಿದ್ದ ಹಲವು ರೋಗಿಗಳನ್ನು ಸುರಕ್ಷಿತ ಸ್ಥಳದಲ್ಲಿದ್ದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಎಲ್ ಡೊರಾಡೊ ನಗರದಲ್ಲಿನ ಜೈಲಿನಲ್ಲಿದ್ದ ಖೈದಿಗಳನ್ನೂ ನೆರೆಯ ಗ್ರಾಮದ ಜೈಲಿಗೆ ಸ್ಥಳಾಂತರಿಸಲಾಗಿದೆ. ಬುಧವಾರ ಕ್ಯಾಲಿಫೋರ್ನಿಯಾದಲ್ಲಿ ತೀವ್ರ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಇದರಿಂದ ಕಾಡ್ಗಿಚ್ಚು ಮತ್ತಷ್ಟು ತೀವ್ರವಾಗಿ ಹರಡಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News