3 ನಿಮಿಷ ತಡವಾಗಿದ್ದಕ್ಕೆ ಚಿನ್ನವನ್ನೇ ದಂಡವಾಗಿ ತೆತ್ತ ಮಲೇಶ್ಯ ಶಾಟ್‌ಪುಟ್ ಪಟು ಮುಹಮ್ಮದ್‌ ಝಿಯಾದ್‌!

Update: 2021-09-01 14:18 GMT
photo: twitter

ಟೋಕಿಯೊ, ಸೆ. 1: ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಶಾಟ್‌ಪುಟ್ ಸ್ಪರ್ಧೆಯ ಎಫ್ 20 ವಿಭಾಗದಲ್ಲಿ ಮಲೇಶ್ಯದ ಶಾಟ್‌ಪುಟ್‌ ಆಟಗಾರ ಮುಹಮ್ಮದ್‌ ಝಿಯಾದ್‌ ಝೋಲ್‌ಕೆಫ್ಲಿ ಮಂಗಳವಾರ ಚಿನ್ನ ಗೆದ್ದರು. ಆದರೆ ವಿಜಯದ ಬಳಿಕ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಯಿತು. ಯಾಕೆಂದರೆ ಅವರು ಸ್ಪರ್ಧೆಗೆ ಮೂರು ನಿಮಿಷ ತಡವಾಗಿ ಬಂದಿದ್ದರು.

 ಝೋಲ್‌ಕೆಫ್ಲಿ ಮತ್ತು ಇತರ ಇಬ್ಬರು ಸ್ಪರ್ಧೆಗೆ ಸರಿಯಾದ ಸಮಯದಲ್ಲಿ ಹಾಜರಾಗುವಲ್ಲಿ ವಿಫಲವಾಗಿದ್ದರು. ಹಾಗಾಗಿ ಅವರಿಗೆ ಪ್ರತಿಭಟನೆಯ ರೂಪದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು ಎಂದು ಅಂತರ್‌ರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯ ವಕ್ತಾರ ಕ್ರೇಗ್ ಸ್ಪೆನ್ಸ್ ತಿಳಿಸಿದರು.

 ಅವರು ತಡವಾಗಿ ಸ್ಪರ್ಧೆಗೆ ಆಗಮಿಸಿದ್ದರು. ತಡವಾಗಿದ್ದಕ್ಕೆಅವರಿಗೆ ತಾರ್ಕಿಕ ಕಾರಣಗಳು ಇದ್ದಿರಬಹುದು. ಹಾಗಾಗಿ ತಡವಾಗಿದ್ದಕ್ಕೆ ಸಂಬಂಧಿಸಿದ ವಾಸ್ತವಾಂಶಗಳನ್ನು ಬಳಿಕ ಪರಿಶೀಲಿಸಲು ತೀರ್ಮಾನಿಸಿ ಅವರಿಗೆ ಸ್ಪರ್ಧಿಸಲು ನಾವು ಅವಕಾಶ ನೀಡಿದೆವು ಎಂದು ಅವರು ನುಡಿದರು.

 ಬಳಿಕ, ರೆಫರಿಯೊಬ್ಬರು ಅವರು ತಡವಾಗಿರುವುದಕ್ಕೆ ಕಾರಣಗಳನ್ನು ಪರಿಶೀಲಿಸಿದರು. ಸರಿಯಾದ ಸಮಯದಲ್ಲಿ ಸ್ಪರ್ಧಾಕಣದಲ್ಲಿ ಹಾಜರಿರಲು ವಿಫಲವಾಗಿರುವುದಕ್ಕೆ ಸಮರ್ಥನೀಯ ಕಾರಣವೇನೂ ಇಲ್ಲ ಎಂಬ ನಿರ್ಧಾರಕ್ಕೆರೆಫರಿ ಬಂದಿದ್ದಾರೆ ಎಂದು ವಿಶೇಷ ಚೇತನ ಕ್ರೀಡೆಗಳ ಆಡಳಿತ ಮಂಡಳಿಯಾಗಿರುವ ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇದಕ್ಕೆ ಸಂಬಂಧಿಸಿದ ಮೇಲ್ಮನವಿಯೊಂದನ್ನೂ ತಳ್ಳಿ ಹಾಕಲಾಗಿದೆ ಎಂದು ಅದು ಹೇಳಿದೆ.

ಈ ಹಿನ್ನೆಲೆಯಲ್ಲಿ ಚಿನ್ನವು ಯುಕ್ರೇನ್‌ನ ಮ್ಯಾಕ್ಸಿಮ್‌ ಕೋವಲ್‌ ಪಾಲಾಯಿತು ಹಾಗೂ ಬೆಳ್ಳಿಯನ್ನು ಯುಕ್ರೇನ್‌ನವರೇ ಆದ ಅಲೆಕ್ಸಾಂಡರ್‌ ಯರೊವ್ಯಿ ಪಡೆದುಕೊಂಡರು. ಕಂಚು ಗ್ರೀಸ್‌ನ ಎಫ್‌ಸ್ಟ್ರಾಟಿಯೊಸ್ ನಿಕೊಲೈಡಿಸ್ ಪಡೆದರು.

 ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಮಲೇಶ್ಯನ್ನರು ಯುಕ್ರೇನನ್ನು ದೂಷಿಸುತ್ತಿದ್ದಾರೆ. ಆದರೆ ನಾವು ನಿಯಮಗಳನ್ನು ಅನುಸರಿಸಿದ್ದೇವೆ. ಮಲೇಶ್ಯನ್ನರು ತಡವಾಗಿ ಆಗಮಿಸಿದ್ದಕ್ಕೆ ಯುಕ್ರೇನಿಯನ್ನರು ಕಾರಣವಲ್ಲ ಎಂದು ಸ್ಪೆನ್ಸ್ ಹೇಳಿದರು.

 ನಮಗೆ ಘೋಷಣೆ ಕೇಳಲಿಲ್ಲ ಅಥವಾ ಅದು ನಮಗೆ ಅರ್ಥವಾಗುವ ಭಾಷೆಯಲ್ಲಿ ಇರಲಿಲ್ಲ ಎಂಬ ವಿವರಣೆಯನ್ನು ಮಲೇಶ್ಯದ ಶಾಟ್‌ಪುಟ್ ಪಟು ಮತ್ತು ಇತರ ಇಬ್ಬರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News