ಪಾಕ್ ಗೆ ನೆರವಾಗುವ ಉದ್ದೇಶದಿಂದ ಅಫ್ಗಾನ್ ವಿಮಾನ ನಿಲ್ದಾಣ ವಶಕ್ಕೆ ಚೀನಾ ಪ್ರಯತ್ನ: ನಿಕ್ಕಿ ಹ್ಯಾಲೆ

Update: 2021-09-02 16:39 GMT
photo: instagram.com/nikkihaley

ವಾಷಿಂಗ್ಟನ್, ಸೆ.2: ಯುದ್ಧದಿಂದ ಜರ್ಝರಿತವಾಗಿರುವ ಅಫ್ಗಾನಿಸ್ತಾನದ ಬಗ್ರಾಮ್ ವಾಯುನೆಲೆಯನ್ನು ವಶಕ್ಕೆ ಪಡೆಯಲು ಚೀನಾ ಪ್ರಯತ್ನಿಸುತ್ತಿದೆ. ಭಾರತದ ವಿರುದ್ಧ ಪಾಕಿಸ್ತಾನವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ವಾಯುನೆಲೆಯನ್ನು ಬಳಸಲು ಪಾಕ್ಗೆ ಅನುವು ಮಾಡಿಕೊಡುವುದು ಚೀನಾದ ಉದ್ದೇಶವಾಗಿದ್ದು ಈ ಬಗ್ಗೆ ಅಮೆರಿಕ ನಿಕಟ ಗಮನ ಹರಿಸಬೇಕಾಗಿದೆ ಎಂದು ಅಮೆರಿಕದ ಮಾಜಿ ಹಿರಿಯ ರಾಜತಾಂತ್ರಿಕರು ಎಚ್ಚರಿಸಿದ್ದಾರೆ.

 ಅಫ್ಗಾನ್ ನಿಂದ ಅಮೆರಿಕದ ಪಡೆಗಳನ್ನು ಹಿಂದಕ್ಕೆ ಪಡೆಯುವ ಆತುರದ ನಿರ್ಧಾರದಿಂದ ಅಧ್ಯಕ್ಷ ಜೋ ಬೈಡನ್ ಅಮೆರಿಕದ ಮಿತ್ರರಾಷ್ಟ್ರಗಳ ವಿಶ್ವಾಸ ಕಳೆದುಕೊಂಡಿದ್ದಾರೆ. ಇದೀಗ ಅಮೆರಿಕದ ಎದುರು ಸವಾಲುಗಳ ಸರಮಾಲೆಯೇ ಎದುರಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕದ ಮಾಜಿ ರಾಯಭಾರಿಯಾಗಿದ್ದ ನಿಕ್ಕಿ ಹ್ಯಾಲೆ ಹೇಳಿದ್ದಾರೆ.

ಅಮೆರಿಕನ್ನರ ಸುರಕ್ಷತೆಯನ್ನು ಮತ್ತು ದೇಶದ ಸೈಬರ್ ಭದ್ರತೆ ಬಲಿಷ್ಟವಾಗಿದೆ ಎಂಬುದನ್ನು ಬೈಡನ್ ಖಾತರಿಪಡಿಸಬೇಕಾಗಿದೆ. ಯಾಕೆಂದರೆ ನಾವು ಪ್ರತಿಹೋರಾಟದ ಲಕ್ಷಣವನ್ನೇ ತೋರದಿರುವುದರಿಂದ ರಶ್ಯಾದಂತಹ ದೇಶಗಳು ನಮ್ಮ ಮಾಹಿತಿಯನ್ನು ಹ್ಯಾಕ್ ಮಾಡಬಹುದು. ಇದೇ ವೇಳೆ ಚೀನಾದ ಬಗ್ಗೆಯೂ ಗಮನಹರಿಸಬೇಕಾಗಿದೆ. 

ಬಗ್ರಾಮ್ ವಾಯುನೆಲೆಯನ್ನು ನಿಯಂತ್ರಣಕ್ಕೆ ಪಡೆದು, ಇದರ ಮೂಲಕ ಭಾರತದ ವಿರುದ್ಧದ ಕಾರ್ಯಾಚರಣೆಗೆ ಪಾಕ್ ಗೆ ನೆರವಾಗುವುದು ಚೀನಾದ ಉದ್ದೇಶವಾಗಿದೆ. ಹೀಗೆ ನಮ್ಮೆದುರು ಹಲವು ಸವಾಲುಗಳಿವೆ. ಈಗ ಬೈಡೆನ್ ಮಾಡಬೇಕಿರುವ ಮೊದಲ ಕೆಲಸವೆಂದರೆ ನಮ್ಮ ಮಿತ್ರರಾಷ್ಟ್ರಗಳನ್ನು, ಅವರೊಂದಿಗಿನ ಸಂಬಂಧವನ್ನು ಬಲಗೊಳಿಸುವುದು ಮತ್ತು ಈ ಮೂಲಕ ಭವಿಷ್ಯದಲ್ಲಿ ಎದುರಾಗಬಹುದಾದ ಸೈಬರ್ ದಾಳಿ ಅಥವಾ ಭಯೋತ್ಪಾದಕರ ದಾಳಿ ಘಟನೆಗಳನ್ನು ಎದುರಿಸಲು ಸನ್ನದ್ಧರಾಗುವುದು ಎಂದು ಹ್ಯಾಲೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News