×
Ad

ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಮೈದಾನದೊಳಗೆ ನುಸುಳಿದ ‘ಜಾರ್ವೊ’

Update: 2021-09-03 18:53 IST
photo : twitter

ಲಂಡನ್: ಹೆಡ್ಡಿಂಗ್ಲೆಯಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಆಟದ ಮೈದಾನಕ್ಕೆ ನುಗ್ಗಿದ್ದ ಹಾಗೂ  ಭದ್ರತಾ ಉಲ್ಲಂಘನೆಯ ಆರೋಪದ ಮೇಲೆ ಆಜೀವ ನಿಷೇಧಕ್ಕೊಳಗಾದ  ಯೂ ಟ್ಯೂಬರ್ ಡೇನಿಯಲ್ ಜಾರ್ವಿಸ್(ಜಾರ್ವೊ69) ಇಂಗ್ಲೆಂಡ್ ಹಾಗೂ  ಭಾರತದ ನಡುವೆ ಓವಲ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ 2ನೇ ದಿನವಾದ ಶುಕ್ರವಾರ  ಮೈದಾನದೊಳಗೆ ನುಸುಳಿದ್ದಾರೆ. ಈ ಬಾರಿ ಅವರು ಬೌಲಿಂಗ್ ಮಾಡಲು ಹೋಗಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಜಾನಿ ಬೈರ್ ಸ್ಟೋವ್ ಗೆ ಢಿಕ್ಕಿ ಹೊಡೆದಿದ್ದಾರೆ.

ಭಾರತದ ಬೌಲರ್ ಉಮೇಶ್ ಯಾದವ್ ಬೌಲಿಂಗ್ ಮಾಡಲು ಸಿದ್ಧತೆಯಲ್ಲಿದ್ದಾಗ ಓಡಿಬಂದ ಜಾರ್ವೊ ಚೆಂಡನ್ನು ಎಸೆದರು. ಈ ವೇಳೆ ಅವರು ನಾನ್ ಸ್ಟ್ರೈಕ್ ನಲ್ಲಿದ್ದ ಇಂಗ್ಲೆಂಡ್ ಬ್ಯಾಟ್ಸ್ ಮನ್ ಜಾನ್ ಬೈರ್ ಸ್ಟೋವ್ ಗೆ ಢಿಕ್ಕಿ ಹೊಡೆದರು. ಜಾರ್ವೊ ಏಕಾಏಕಿ ಮೈದಾನಕ್ಕೆ ನುಸುಳಿದ್ದರಿಂದ ಆಟಗಾರರು ಅಚ್ಚರಿಗೊಳಗಾದರು.

ಭದ್ರತಾ ಸಿಬ್ಬಂದಿ ತಕ್ಷಣವೇ ಜಾರ್ವೊವನ್ನು ಆಟದ ಮೈದಾನದಿಂದ ದೂರ ಕರೆದೊಯ್ದರು.

ಭಾರತದ ಆಟಗಾರರು ಧರಿಸುವ ಜರ್ಸಿಯನ್ನು ಹೋಲುವ ಟೀ ಶರ್ಟ್ ಧರಿಸಿರುವ ಜಾರ್ವೊ ಮೈದಾನಕ್ಕೆ ಮತ್ತೊಮ್ಮೆ  ಒಳನುಸುಳುವ ಮೂಲಕ ಎಲ್ಲರನ್ನು ಆಕರ್ಷಿಸಿದ್ದಾರೆ. ಆದರೆ ಯಾರ್ಕ್ ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಇದನ್ನು ಭದ್ರತಾ ಉಲ್ಲಂಘನೆಯಾಗಿ ಪರಿಗಣಿಸಿದೆ. ಮುಂದಿನ ದಿನಗಳಲ್ಲಿ ಜಾರ್ವೊ ಅವರನ್ನು ಲೀಡ್ಸ್ ಗ್ಯಾಲರಿಯಲ್ಲಿ ಅನುಮತಿಸಲಾಗುವುದಿಲ್ಲ ಎಂದಿದೆ.

ಇಂದಿನ ಘಟನೆಯ ನಂತರ  ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳ ಸುರಿಮಳೆಯಾಯಿತು.  ಕೆಲವರು ಈ ಸನ್ನಿವೇಶವನ್ನು ತಮಾಷೆಯಾಗಿ ತೆಗೆದುಕೊಂಡರೆ, ಇನ್ನೂ ಕೆಲವರು ಭದ್ರತಾ ವಿಭಾಗದ ಸಡಿಲಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಜಾರ್ವೊ ಹೆಡಿಂಗ್ಲಿಯಲ್ಲಿ ನಡೆದಿದ್ದ ಮೂರನೇ ಟೆಸ್ಟ್ ನಲ್ಲಿ  ರೋಹಿತ್ ಶರ್ಮಾ ಅವರ ವಿಕೆಟ್ ಪತನದ ನಂತರ ಮೈದಾನಕ್ಕೆ ನುಸುಳಿದ್ದರು. ಕೂಡಲೇ ಭದ್ರತಾ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಜಾರ್ವೊ ಅವರನ್ನು ಮೈದಾನದಿಂದ ಹೊರಗೆ ಕಳುಹಿಸಿದ್ದರು.

ಇದಕ್ಕೂ ಮೊದಲು ಲಾರ್ಡ್ಸ್  ನಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ನ ನಾಲ್ಕನೇ ದಿನದಂದೂ  ಜಾರ್ವೊ ಮೈದಾನದೊಳಗೆ ನುಗ್ಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News