ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್: ಇತಿಹಾಸ ನಿರ್ಮಿಸುವತ್ತ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಚಿತ್ತ

Update: 2021-09-05 00:58 GMT
photo :twitter/@AwanishSharan

ಟೋಕಿಯೊ: ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಸುಹಾಸ್ ಲಲಿನಕೆರೆ ಯತಿರಾಜ್ ಅವರು ಟೋಕಿಯೊದಲ್ಲಿ ರವಿವಾರ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ನ  ಪುರುಷರ ಸಿಂಗಲ್ಸ್ ಪ್ಯಾರಾ-ಬ್ಯಾಡ್ಮಿಂಟನ್ ಎಸ್ಎಲ್ 4  ವಿಭಾಗದ ಫೈನಲ್ ನಲ್ಲಿ ಚಿನ್ನವನ್ನು ಜಯಿಸಿ ಇತಿಹಾಸ ನಿರ್ಮಿಸಲು ಎದುರು ನೋಡುತ್ತಿದ್ದಾರೆ.

 ಗೌತಮ್ ಬುದ್ಧ ನಗರದ (ನೊಯ್ಡಾ) ಜಿಲ್ಲಾ ಮ್ಯಾಜಿಸ್ಟ್ರೇಟ್ 38 ವರ್ಷದ ಸುಹಾಸ್ ಒಂದು ವೇಳೆ ಫೈನಲ್ ನಲ್ಲಿ ಎಡವಿದರೂ ಬೆಳ್ಳಿ ಗೆಲ್ಲುವುದು ಖಚಿತ. ಹೀಗಾಗಿ ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿಯಾಗಿ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ.

ಪ್ಯಾರಾ ಬ್ಯಾಡ್ಮಿಂಟನ್ ನ ಎಸ್‌ಎಲ್ 4 ವಿಭಾಗದಲ್ಲಿ ಸದ್ಯ  ವಿಶ್ವ ನಂ .3 ನೇ ಆಟಗಾರನಾಗಿರುವ ಸುಹಾಸ್ ಈಗ ನಡೆಯುತ್ತಿರುವ ಗೇಮ್ಸ್‌ನಲ್ಲಿ ಶನಿವಾರದ ಸೆಮಿಫೈನಲ್ ಸೇರಿದಂತೆ ಮೂರು ಪಂದ್ಯಗಳನ್ನು ಆಡಿದ್ದಾರೆ. ಅವರು ಈ ತನಕ  ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಲು ಸುಹಾಸ್ ಗೆ 20 ನಿಮಿಷಗಳಿಗಿಂತಲೂ ಕಡಿಮೆ ಸಮಯ ಬೇಕಾಗಿದ್ದರೂ, ಶನಿವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ 31 ನಿಮಿಷಗಳ ಹೋರಾಟದಲ್ಲಿ ಇಂಡೊನೇಷ್ಯಾದ ಫ್ರೆಡಿ ಸೆಟಿಯಾವಾನ್ ಅವರನ್ನು 21-9 21-15  ಗೇಮ್ ಗಳ ಅಂತರದಿಂದ ಮಣಿಸಿ ಫೈನಲ್ ತಲುಪಿದ್ದರು.

ತನ್ನ ಕಾಲಿನ ಊನವನ್ನು ಮೆಟ್ಟಿ ನಿಂತಿರುವ  2007 ರ ಬ್ಯಾಚ್‌ನ ಐಎಎಸ್ ಅಧಿಕಾರಿ ರವಿವಾರ ನಡೆಯುವ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಫ್ರಾನ್ಸ್‌ನ ಲುಕಾಸ್ ಮಝೂರ್ ಅವರನ್ನು ಎದುರಿಸಲಿದ್ದಾರೆ.

ಕರ್ನಾಟಕದ ಹಾಸನದಲ್ಲಿ 1983ರ ಜುಲೈ 2ರಂದು  ಹುಟ್ಟಿದ ಸುಹಾಸ್ ಇಂಜಿನಿಯರ್ ಪದವೀಧರರು.  ಇಂಟರ್ನೆಟ್ ಬಳಕೆದಾರರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ #Cheer4Suhas ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಮಾಡುವ ಮೂಲಕ ಅವರಿಗೆ ಬೆಂಬಲವನ್ನು ನೀಡುತ್ತಿದ್ದಾರೆ.

ಎನ್‌ಐಟಿ ಕರ್ನಾಟಕದಿಂದ ಕಂಪ್ಯೂಟರ್ ಎಂಜಿನಿಯರ್ ಆಗಿ ಪದವಿ ಪಡೆದಿರುವ ಸುಹಾಸ್, ಈ ಹಿಂದೆ ಪ್ರಯಾಗರಾಜ್, ಆಗ್ರಾ, ಅಝಮ್‌ಗಡ, ಜೌನ್‌ಪುರ, ಸೋನ್‌ಭದ್ರಾ ಜಿಲ್ಲೆಗಳ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆಗಿ ಸೇವೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News