ನಾಲ್ಕನೇ ಟೆಸ್ಟ್: ಭಾರತ 466 ರನ್‌ಗೆ ಆಲೌಟ್, ಇಂಗ್ಲೆಂಡ್ ಗೆಲುವಿಗೆ ಕಠಿಣ ಸವಾಲು

Update: 2021-09-05 15:41 GMT
photo: twitter.com/BCCI

 ಲಂಡನ್, ಸೆ.5: ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿದ ಶಾರ್ದೂಲ್ ಠಾಕೂರ್ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ನೆರವಿನಿಂದ ಭಾರತವು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನ 2ನೇ ಇನಿಂಗ್ಸ್‌ನಲ್ಲಿ 466 ರನ್ ಗಳಿಸಿ ಆಲೌಟಾಗಿದೆ. ಇಂಗ್ಲೆಂಡ್ ಗೆಲುವಿಗೆ 368 ರನ್ ಕಠಿಣ ಗುರಿ ನೀಡಿದೆ.
 
3 ವಿಕೆಟ್ ನಷ್ಟಕ್ಕೆ 270 ರನ್ ನಿಂದ ನಾಲ್ಕನೇ ದಿನದಾಟವನ್ನು ಮುಂದುವರಿಸಿದ ಭಾರತವು ನಾಯಕ ವಿರಾಟ್ ಕೊಹ್ಲಿ(44) ಹಾಗೂ ರವೀಂದ್ರ ಜಡೇಜ(17) ವಿಕೆಟನ್ನು ಕಳೆದುಕೊಂಡಿತು. ಅಜಿಂಕ್ಯ ರಹಾನೆ ಖಾತೆ ತೆರೆಯುವ ಮೊದಲೇ ವೋಕ್ಸ್‌ಗೆ ವಿಕೆಟ್ ಒಪ್ಪಿಸಿ ಕಳಪೆ ಪ್ರದರ್ಶನ ಮುಂದುವರಿಸಿದರು.

ಆಗ 7ನೇ ವಿಕೆಟ್ ಜೊತೆಯಾಟದಲ್ಲಿ ಬರೋಬ್ಬರಿ 100 ರನ್ ಸೇರಿಸಿದ ವಿಕೆಟ್ ಕೀಪರ್ ರಿಷಭ್ ಪಂತ್(50, 106 ಎಸೆತ, 4 ಬೌಂ.)ಹಾಗೂ ಶಾರ್ದೂಲ್(60,72 ಎಸೆತ, 7 ಬೌಂಡರಿ, 1 ಸಿ.)ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು.

2013ರ ಬಳಿಕ ಮೊದಲ ಬಾರಿ ಭಾರತವು ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 400ಕ್ಕೂ ಅಧಿಕ ರನ್ ಗಳಿಸಿತು. ಶಾರ್ದೂಲ್ ಠಾಕೂರ್ 8ನೇ ಕ್ರಮಾಂಕದಲ್ಲಿ ಒಂದೇ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಹಿಂದೆ ಹರ್ಭಜನ್ ಸಿಂಗ್, ಭುವನೇಶ್ವರ ಹಾಗೂ ವೃದ್ಧಿಮಾನ್ ಸಹಾ ಈ ಸಾಧನೆ ಮಾಡಿದ್ದರು.

ಬಾಲಂಗೋಚಿಗಳಾದ ಉಮೇಶ್ ಯಾದವ್(25) ಹಾಗೂ ಜಸ್‌ಪ್ರೀತ್ ಬುಮ್ರಾ(24)ಗಮನಾರ್ಹ ಕೊಡುಗೆ ನೀಡಿ ತಂಡದ ಮೊತ್ತವನ್ನು ಹಿಗ್ಗಿಸಲು ನೆರವಾದರು. ಇಂಗ್ಲೆಂಡ್ ನ ಪರ ಕ್ರಿಸ್ ವೋಕ್ಸ್(3-83)ಯಶಸ್ವಿ ಬೌಲರ್ ಎನಿಸಿಕೊಂಡರು. ರಾಬಿನ್ಸನ್(2-105) ಹಾಗೂ ಮೊಯಿನ್ ಅಲಿ(2-118)ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News