ಪ್ಯಾರಾಲಿಂಪಿಕ್ಸ್ ಕಂಚು ಗೆದ್ದು ಅನರ್ಹಗೊಂಡ ಈ ಅಥ್ಲೀಟ್ ಭವಿಷ್ಯ ಅನಿಶ್ಚಿತ

Update: 2021-09-11 04:07 GMT

ಚೆನ್ನೈ, ಸೆ.11: ಇತ್ತೀಚೆಗೆ ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನ ಡಿಸ್ಕಸ್ ಥ್ರೋ (ಎಫ್52) ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರೂ, ಬಳಿಕ ಸ್ಪರ್ಧೆಗೆ ಅನರ್ಹ ಎಂದು ನಿರ್ಣಯಿಸಲ್ಪಟ್ಟ 41 ವರ್ಷ ವಯಸ್ಸಿನ ಹರ್ಯಾಣ ಪ್ಯಾರಾ ಅಥ್ಲೀಟ್ ವಿನೋದ್ ಕುಮಾರ್ ಅವರ ಭವಿಷ್ಯ ಇದೀಗ ಅನಿಶ್ಚಿತವಾಗಿದೆ.

ಟೋಕಿಯೊ ಕೂಟಕ್ಕೆ ಅರ್ಹತೆ ಪಡೆದಾಗ ಅವರಿಗೆ ಇದ್ದ ಏಕೈಕ ಕನಸು ಪದಕ ಗಳಿಸುವುದು. ಇದನ್ನು ನನಸುಗೊಳಿಸುವ ಪ್ರಯತ್ನವಾಗಿ ಜೀವನಾಧಾರವಾಗಿದ್ದ ಕಿರಾಣಿ ಅಂಗಡಿಯನ್ನೂ ಮುಚ್ಚಿ ಅಭ್ಯಾಸಕ್ಕೆ ಗಮನಹರಿಸಿದರು. ತರಬೇತಿಗೆ ಗಮನಹರಿಸಿದ್ದರಿಂದ ಸುಮಾರು ಎಂಟು ಲಕ್ಷ ರೂಪಾಯಿ ಸಾಲ ಮಾಡಿದರು. ಆದರೆ ಇದೀಗ ಆದಾಯ ಮೂಲವಿಲ್ಲದೇ ಸಾಲ ಮರುಪಾವತಿಗೆ ಪರದಾಡುವ ಸ್ಥಿತಿ ಬಂದಿದೆ. ಜತೆಗೆ ಪತ್ನಿ ಅನಿತಾ, ಮಗಳು ಸಾಕ್ಷಿ (7) ಮತ್ತು ಯಕ್ಷಿ (2) ಅವರನ್ನೊಳಗೊಂಡ ಕುಟುಂಬ ನಿರ್ವಹಣೆಗೂ ಕಷ್ಟವಾಗಿದೆ.

"ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಸಾಧನೆ ಮೂಲಕ ಈ ಎಲ್ಲ ಸಮಸ್ಯೆಗಳಿಂದ ಹೊರಬರಲು ಪ್ರಯತ್ನಿಸಿದ್ದೆ. ಪೋಡಿಯಂ ಸಾಧನೆ ಮಾಡಿದರೂ, ಬಳಿಕ ನನ್ನನ್ನು ಅನರ್ಹ ಎಂದು ನಿರ್ಣಯಿಸಿ ಗೆದ್ದ ಕಂಚಿನ ಪದಕ ನಿರಾಕರಿಸಲಾಯಿತು" ಎಂದು ರೋಹ್ಟಕ್‌ನಲ್ಲಿ ಬಾಡಿಗೆಮನೆಯಲ್ಲಿರುವ ವಿನೋದ್ ನೋವಿನಿಂದ ಹೇಳಿದರು.

2019ರ ವಿಶ್ವ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಟೋಕಿಯೊಗೆ ಅರ್ಹತೆ ಪಡೆದಿದ್ದರು. ಇದಕ್ಕೂ ಮುನ್ನ ಪ್ಯಾರೀಸ್‌ನಲ್ಲಿ ವರ್ಗೀಕರಣಕ್ಕೆ ಒಳಪಡಲು ತೆರಳಿದ್ದರು. ಇದಕ್ಕಾಗಿ ಸಹೋದರಿ ಬಳಿ ಮೂರು ಲಕ್ಷ ರೂ. ಸಾಲ ಪಡೆದಿದ್ದರು. ಕಳೆದ ಅಕ್ಟೋಬರ್‌ನಿಂದ ಬೆಂಗಳೂರು ಎಸ್‌ಎಐ ಕೇಂದ್ರದಲ್ಲಿ ತರಬೇತಿಗೆ ತೆರಳಿದ್ದರು. "ಇದೀಗ ಹನ್ನೊಂದು ತಿಂಗಳ ಬಳಿಕ ಮತ್ತೆ ಮನೆಗೆ ತೆರಳುತ್ತಿದ್ದೇನೆ. ಇದ್ದ ಕಿರಾಣಿ ಅಂಗಡಿ ಮುಚ್ಚಿರುವುದರಿಂದ ಪರ್ಯಾಯ ಉದ್ಯೋಗ ಹುಡುಕಬೇಕಾಗಿದೆ" ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಂಗೆ ಆಯ್ಕೆಯಾಗಿದ್ದ ಇವರು, ಟಿಓಪಿಎಸ್ ಯೋಜನೆಯಡಿ ದೊರಕಿದ ಹಣಕಾಸು ನೆರವಿನಿಂದ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ ಹೊಸ ಋತುವಿಗೆ ಆಯ್ಕೆ ಮಾಡುವ ಮುನ್ನ ಅಧಿಕಾರಿಗಳು ಅಥ್ಲೀಟ್‌ಗಳ ಸಾಧನೆಯ ಪರಾಮರ್ಶೆ ನಡೆಸಲಿದ್ದಾರೆ.

ಆಗಸ್ಟ್ 22ರಂದು ವಿನೋದ್ ಅವರ ತಪಾಸಣೆ ನಡೆಸಿ, ಎಫ್52 ವರ್ಗದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಆದರೆ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಡಾಟಾಬೇಸ್‌ನ ಪ್ರಕಾರ, ಈ ವರ್ಷಕ್ಕೆ ಅವರ ವರ್ಗೀಕರಣ ಸ್ಥಿತಿ ಪರಾಮರ್ಶೆಯಲ್ಲಿದೆ. ವರ್ಗೀಕರಣ ಸಮಸ್ಯೆಗೆ ಮುನ್ನ ವಿನೋದ್ ಹಾಗೂ ಮರಿಯಪ್ಪನ್ ತಂಗವೇಲು ಹಾಗೂ ನಾಲ್ವರು ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ವ್ಯಕ್ತಿತ ಜತೆ ಸಂಪರ್ಕ ಹೊಂದಿದ್ದ ಕಾರಣಕ್ಕೆ ಕ್ವಾರಂಟೈನ್‌ಗೆ ಒಳಗಾಗುವಂತೆ ಸೂಚಿಸಲಾಗಿತ್ತು.

ಈ ಹಿನ್ನಡೆಯ ನಡುವೆಯೂ, 19.91 ಮೀಟರ್ ದೂರಕ್ಕೆ ಡಿಸ್ಕ್ ಎಸೆದು ಪೋಲೆಂಡ್‌ನ ಕಿಯೊಟ್ ಕೊಸೆವಿಚ್ (20.02 ಮೀಟರ್) ಮತ್ತು ಕ್ರೊವೇಷಿಯಾದ ವಲಿಮಿರ್ ಸ್ಯಾಂಡರ್ (19.98) ಬಳಿಕ ಮೂರನೇ ಸ್ಥಾನ ಗೆದ್ದಿದ್ದರು. ಆದರೆ ಫಲಿತಾಂಶವನ್ನು ತಡೆಹಿಡಿಯಲಾಯಿತು ಹಾಗೂ ಮರುದಿನ ವಿನೋದ್ ಅನರ್ಹರೆಂದು ಘೋಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News