ಕ್ರೀಡಾ ಪ್ರಾಧಿಕಾರವನ್ನು ಟೀಕಿಸಿದ ತಿಂಗಳುಗಳ ಬಳಿಕ ನೀರಜ್ ಚೋಪ್ರಾರ ಕೋಚ್ ಅನ್ನು ವಜಾಗೊಳಿಸಿದ ಅಥ್ಲೆಟಿಕ್ ಫೆಡರೇಶನ್!

Update: 2021-09-14 06:56 GMT
ಉವೆ ಹಾಹ್ನ್ , ನೀರಜ್ ಚೋಪ್ರಾ (Photo: Twitter)

ಹೊಸದಿಲ್ಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ  ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ತರಬೇತಿ ನೀಡಿದ್ದ  ರಾಷ್ಟ್ರೀಯ ಮುಖ್ಯ ಜಾವೆಲಿನ್ ಕೋಚ್ ಉವೆ ಹಾಹ್ನ್ ಅವರನ್ನು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಸೋಮವಾರ ಹುದ್ದೆಯಿಂದ ಕೈಬಿಟ್ಟಿದೆ ಹಾಗೂ ಅವರ 'ನಿರ್ವಹಣೆ' ಸಮಾಧಾನಕರವಾಗಿಲ್ಲ ಎಂದು ಹೇಳಿದೆ. ಸದ್ಯದಲ್ಲಿಯೇ ಎರಡು ಹೊಸ ವಿದೇಶಿ ಕೋಚುಗಳನ್ನು  ನೇಮಕಗೊಳಿಸುವುದಾಗಿಯೂ ಫೆಡರೇಶನ್ ಹೇಳಿದೆ ಎಂದು indianexpress.com ವರದಿ ಮಾಡಿದೆ.

ಹಾಹ್ನ್ ಅವರನ್ನು 2017ರಲ್ಲಿ ಮುಖ್ಯ ಕೋಚ್ ಆಗಿ ನೀರಜ್ ಚೋಪ್ರಾ ಅವರನ್ನು ಹಾಗೂ ಇತರ ಇಬ್ಬರು ಒಲಿಂಪಿಯನ್‍ಗಳಾದ ಶಿವಪಾಲ್ ಸಿಂಗ್ ಹಾಗೂ ಅನ್ನು ರಾಣಿ ಅವರಿಗೆ ತರಬೇತಿ ನೀಡಲು ನೇಮಕಗೊಳಿಸಲಾಗಿತ್ತು. 59 ವರ್ಷದ ಹಾಹ್ನ್ ಅವರು ಜರ್ಮನಿಯವರಾಗಿದ್ದು  ವಿಶ್ವ ದಾಖಲೆಯನ್ನು ಹೊಂದಿದವರಾಗಿದ್ದಾರಲ್ಲದೆ ಟೋಕಿಯೋ ಒಲಿಂಪಿಕ್ಸ್ ಮುಕ್ತಾಯದ ತನಕ ಅವರ ಗುತ್ತಿಗೆ ಊರ್ಜಿತದಲ್ಲಿತ್ತು.

ನೀರಜ್ ಚೋಪ್ರಾ ಕೂಡ ತಮ್ಮ ಪದಕ ಗೆಲ್ಲುವ ಹಿಂದೆ ಹಾಹ್ನ್ ಅವರ ಶ್ರಮವಿತ್ತು ಎಂದು ಈಗಾಗಲೇ ಹೇಳಿದ್ದರು, ಹಾಗಿದ್ದರೂ ಅವರನ್ನು ಹುದ್ದೆಯಿಂದ ಕೈಬಿಡಲು ಅವರು ಜೂನ್ ತಿಂಗಳಲ್ಲಿ ಭಾರತದ ಕ್ರೀಡಾ ಪ್ರಾಧಿಕಾರ ಮತ್ತು ಎಎಫ್‍ಐ ಅನ್ನು ಟೀಕಿಸಿ ನೀಡಿದ ಹೇಳಿಕೆಗಳು ಕಾರಣವಾಗಿರಬಹುದೆಂದೇ ಊಹಿಸಲಾಗಿದೆ. ಒಲಿಂಪಿಕ್ಸ್ ಪೂರ್ವತಯಾರಿ ಕುರಿತು ಮಾತನಾಡುತ್ತಾ "ಈ ಜನರುಗಳ ಜತೆ ಕೆಲಸ ಮಾಡುವುದು ಕಷ್ಟ'' ಎಂದು ಹಾಹ್ನ್ ಹೇಳಿದ್ದರು ಎಂದು indianexpress.com ವರದಿ ಮಾಡಿದೆ.

"ನಾನು ಇಲ್ಲಿಗೆ ಬಂದಾಗ ಏನನ್ನಾದರೂ ಬದಲಾಯಿಸಬಹುದೆಂದು ಅಂದುಕೊಂಡಿದ್ದೆ. ಆದರೆ ಎಸ್‍ಎಐ ಹಾಗೂ ಎಎಫ್‍ಐ ನ ಜನರೊಂದಿಗೆ ಕೆಲಸ ಮಾಡುವುದು ಬಹಳ ಕಷ್ಟ. ಇದು ಜ್ಞಾನದ ಕೊರತೆಯೇ ಎಂದು ಗೊತ್ತಿಲ್ಲ. ನಮ್ಮ ಕ್ರೀಡಾಳುಗಳಿಗೆ ಅಗತ್ಯ ಸಪ್ಲಿಮೆಂಟ್‍ಗಳನ್ನು ಪೌಷ್ಠಿಕ ತಜ್ಞರ ಮೂಲಕ ಕೇಳಿದಾಗಲೂ ಸರಿಯಾದ ವಸ್ತು ಸಿಗುತ್ತಿಲ್ಲ. ಎಪ್ರಿಲ್‍ನಲ್ಲಿ ಸಹಿ ಹಾಕಲಾದ ಹೊಸ ಗುತ್ತಿಗೆಯ ಬಗ್ಗೆಯೂ ನನಗೆ ಖುಷಿಯಿಲ್ಲ. ಎಪ್ರಿಲ್ ತಿಂಗಳಲ್ಲಿ ನಮ್ಮ ಕೋಚಿಂಗ್ ಪರಿಶೀಲಿಸಿ ವೇತನ ಹೆಚ್ಚಿಸುವ ಭರವಸೆ ನೀಡಲಾಗಿತ್ತು. ಈ ಹಿಂದೆ ಭರವಸೆಗಳಂತೆಯೇ ಇವುಗಳು ಟೊಳ್ಳು ಮಾತುಗಳಾಗಿದ್ದವು,'' ಎಂದೂ ಅವರು ಹೇಳಿದ್ದರು.

ನೀರಜ್ ಚೋಪ್ರಾ ಅವರ ಇನ್ನೊಬ್ಬ ಕೋಚ್ ಕ್ಲಾಸ್ ಬಾರ್ಟೊನೀಟ್ಝ್ ಅವರ ಸೇವೆ ಮುಂದುವರಿಯಲಿದೆ ಎಂದು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಅದಿಲ್ಲೆ ಸುಮರಿವಲ್ಲ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News