ಅಫ್ಘಾನಿಸ್ತಾನದ ಪತನಕ್ಕೆ ನಾಂದಿ ಹಾಡಿದ್ದು ಟ್ರಂಪ್-ತಾಲಿಬಾನ್ ಒಪ್ಪಂದ: ಅಮೆರಿಕ ಸೇನಾಧಿಕಾರಿ ಮೆಕಿಂಝೆ
ವಾಷಿಂಗ್ಟನ್, ಸೆ.30: ಅಫ್ಘಾನಿಸ್ತಾನದಿಂದ ಸೇನೆಯನ್ನು ಸಂಪೂರ್ಣ ಹಿಂಪಡೆಯುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020ರಲ್ಲಿ ತಾಲಿಬಾನ್ಗಳೊಂದಿಗೆ ಮಾಡಿಕೊಂಡ ಒಪ್ಪಂದ ಅಫ್ಘಾನ್ ಸರಕಾರದ ಪತನಕ್ಕೆ ನಾಂದಿ ಹಾಡಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ನ ಮುಖ್ಯಸ್ಥ ಜನರಲ್ ಫ್ರ್ಯಾಂಕ್ ಮೆಕೆಂಝಿ ಹೇಳಿದ್ದಾರೆ.
ಖತರ್ ರಾಜಧಾನಿ ದೋಹದಲ್ಲಿ 2020 ಫೆಬ್ರವರಿ 29ರಂದು ಟ್ರಂಪ್ ಆಡಳಿತ ಮತ್ತು ತಾಲಿಬಾನ್ಗಳೊಂದಿಗೆ ನಡೆದ ಒಪ್ಪಂದವನ್ನು ಉಲ್ಲೇಖಿಸಿದ ಅವರು, ಈ ಒಪ್ಪಂದ ಅಫ್ಘಾನ್ ಸರಕಾರದ ಮೇಲೆ ಮಾರಕ ಪರಿಣಾಮ ಬೀರಿತು. ಜೊತೆಗೆ ಅಲ್ಲಿನ ಸೇನೆಯ ಮನೋಬಲವನ್ನು ಕುಗ್ಗಿಸಿತ್ತು. ಅಲ್ಲಿಂದ ನಾವು ಹೊರತೆರಳುವ ಗಡುವು ನಿರ್ಧರಿಸಲಾಯಿತು ಮತ್ತು ಅಫ್ಘಾನ್ ಸೇನೆಗೆ ಹೊರಗಿನ ಬೆಂಬಲ ಮುಕ್ತಾಯಗೊಳಿಸುವ ದಿನಾಂಕವೂ ನಿಗದಿಯಾಯಿತು ಎಂದು ಅಮೆರಿಕ ಸಂಸತ್ತಿನ ಸ್ಥಾಯೀ ಸಮಿತಿ ‘ಸಶಸ್ತ್ರ ಪಡೆಗಳ ಸದನ ಸಮಿತಿ’ಗೆ ಅವರು ಹೇಳಿದ್ದಾರೆ.
2021ರ ಮೇ ಅಂತ್ಯದೊಳಗೆ ಅಫ್ಘಾನ್ನಿಂದ ಅಮೆರಿಕದ ಸೇನಾಪಡೆ ವಾಪಸಾತಿ ಮತ್ತು ಇದಕ್ಕೆ ಪ್ರತಿಯಾಗಿ ಅಮೆರಿಕ ಮತ್ತು ಮಿತ್ರಪಡೆಗಳ ಮೇಲೆ ತಾಲಿಬಾನ್ ನಡೆಸುವ ದಾಳಿ ಅಂತ್ಯಗೊಳಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಸಭೆಯ ಮುಖ್ಯ ಉದ್ದೇಶ ತಾಲಿಬಾನ್ ಮತ್ತು ಅಫ್ಘಾನ್ ಸರಕಾರದ ಮಧ್ಯೆ ಶಾಂತಿ ಮಾತುಕತೆಗೆ ವೇದಿಕೆ ಸಿದ್ಧಪಡಿಸುವುದಾಗಿತ್ತು. ಆದರೆ ಟ್ರಂಪ್ ಆಡಳಿತ ಅಂತ್ಯವಾಗುವ ಮೊದಲು ಈ ಉದ್ದೇಶ ಈಡೇರಲಿಲ್ಲ. ಜನವರಿಯಲ್ಲಿ ಅಧಿಕಾರಕ್ಕೆ ಬಂದ ಬೈಡನ್, ಅಫ್ಘಾನ್ನಿಂದ ಅಮೆರಿಕ ಸೇನೆ ವಾಪಸಾತಿಗೆ ಹೆಚ್ಚಿನ ಆದ್ಯತೆ ನೀಡಿದರು. ಅಫ್ಘಾನ್ನಲ್ಲಿರುವ ತನ್ನ ಸೇನಾ ಸಲಹೆಗಾರರ ಸಂಖ್ಯೆಯನ್ನು ಅಮೆರಿಕ 2,500ಕ್ಕಿಂತ ಕೆಳಗೆ ಇಳಿಸಿದರೆ ಅಲ್ಲಿನ ಸರಕಾರದ ಪತನ ಅನಿವಾರ್ಯ ಎಂದು ತನಗೆ ಆಗಲೇ ಅನಿಸಿತ್ತು ಎಂದು ಮೆಕೆಂಝಿ ಹೇಳಿದ್ದಾರೆ. ದೋಹ ಒಪ್ಪಂದವು ಅಫ್ಘಾನ್ ಸೇನೆಯ ಮನೋಬಲವನ್ನು ಕುಗ್ಗಿಸಿದ್ದರೆ, ಅಮೆರಿಕದ ಯೋಧರ ಸಂಖ್ಯೆಯನ್ನು ಕಡಿತಗೊಳಿಸುವುದಾಗಿ ಎಪ್ರಿಲ್ನಲ್ಲಿ ಬೈಡನ್ ಘೋಷಿಸಿದ್ದು ‘ಹೆಣದ ಪೆಟ್ಟಿಗೆಗೆ ಬಡಿದ ಮತ್ತೊಂದು ಮೊಳೆಯಾಗಿತ್ತು’ ಎಂದಿದ್ದಾರೆ.
ಮೆಕೆಂಝಿಯ ಅಭಿಪ್ರಾಯಕ್ಕೆ ತನ್ನ ಸಹಮತವಿದೆ ಎಂದು ರಕ್ಷಣಾ ಕಾರ್ಯದರ್ಶಿ ಲಾಯ್ಡೆ ಆಸ್ಟಿನ್ ಹೇಳಿದ್ದಾರೆ. ದೋಹ ಒಪ್ಪಂದದಲ್ಲಿ ಅಮೆರಿಕವು ತಾಲಿಬಾನ್ ವಿರುದ್ಧದ ವಾಯುದಾಳಿ ಅಂತ್ಯಗೊಳಿಸುವ ಅಂಶವೂ ಸೇರಿತ್ತು. ಇದರಿಂದ ತಾಲಿಬಾನ್ ಬಲಗೊಂಡಿತು ಮತ್ತು ಅಫ್ಘಾನ್ ಭದ್ರತಾ ಪಡೆಗಳ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಿದರು ಎಂದು ಆಸ್ಟಿನ್ ಹೇಳಿದ್ದಾರೆ.