ಮುಂಬೈಯನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್
ಶಾರ್ಜಾ, ಅ.2: ವೇಗದ ಬೌಲರ್ ಆವೇಶ್ ಖಾನ್ (3-15) ಹಾಗೂ ಸ್ಪಿನ್ನರ್ ಅಕ್ಷರ್ ಪಟೇಲ್ (3-21) ಅವರ ಅಮೋಘ ಬೌಲಿಂಗ್, ಶ್ರೇಯಸ್ ಅಯ್ಯರ್(ಔಟಾಗದೆ 33) ಹಾಗೂ ಆರ್.ಅಶ್ವಿನ್(ಔಟಾಗದೆ 20)ಅವರ ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 4 ವಿಕೆಟ್‌ಗಳ ಅಂತರದಿಂದ ಮಣಿಸಿದೆ.
ಶನಿವಾರ ನಡೆದ ಐಪಿಎಲ್ ಟೂರ್ನಿಯ 46ನೇ ಪಂದ್ಯದಲ್ಲಿ ಟಾಸ್ ಜಯಿಸಿದ ಡೆಲ್ಲಿ ನಾಯಕ ರಿಷಭ್ ಪಂತ್ ಮುಂಬೈ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದರು. ತಲಾ 3 ವಿಕೆಟ್‌ಗಳನ್ನು ಕಬಳಿಸಿದ ಅಕ್ಷರ್ ಹಾಗೂ ಆವೇಶ್ ಮುಂಬೈಯನ್ನು 8 ವಿಕೆಟ್ ನಷ್ಟಕ್ಕೆ ಕೇವಲ 129 ರನ್‌ಗೆ ನಿಯಂತ್ರಿಸಿದರು.
ಸೂರ್ಯಕುಮಾರ್ ಯಾದವ್ ಹಾಗೂ ಕ್ವಿಂಟನ್ ಡಿಕಾಕ್ ಕ್ರಮವಾಗಿ 33 ಹಾಗೂ 19 ರನ್ ಗಳಿಸಿದರು. ಅಕ್ಷರ್ ಪಟೇಲ್ ಅವರು ಕ್ವಿಂಟನ್ ಡಿಕಾಕ್, ಸೂರ್ಯಕುಮಾರ್ ಹಾಗೂ ಸೌರಭ್ ತಿವಾರಿ(15) ವಿಕೆಟ್‌ಗಳನ್ನು ಪಡೆದರು. ಆವೇಶ್ ಖಾನ್ ಅಪಾಯಕಾರಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ(7),ಹಾರ್ದಿಕ್ ಪಾಂಡ್ಯ(17)ಹಾಗೂ ನಥಾನ್ ಕೌಲ್ಟರ್ ನೀಲ್(1) ವಿಕೆಟ್‌ಗಳನ್ನು ಉರುಳಿಸಿದರು.
ಗೆಲ್ಲಲು 130 ರನ್ ಗುರಿ ಪಡೆದಿದ್ದ ಡೆಲ್ಲಿ 19.1 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 132 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಡೆಲ್ಲಿಯ ಆರಂಭ ಉತ್ತಮವಾಗಿರಲಿಲ್ಲ. 30 ರನ್ ಗಳಿಸುವಷ್ಟರಲ್ಲಿ ಡೆಲ್ಲಿ ಶಿಖರ್ ಧವನ್(8), ಪೃಥ್ವಿ ಶಾ(6) ಹಾಗೂ ಸ್ಟೀವನ್ ಸ್ಮಿತ್(9) ವಿಕೆಟ್ ಗಳನ್ನು ಕಳೆದುಕೊಂಡಿತು.
ರಿಷಭ್ ಪಂತ್(26), ಅಕ್ಷರ್ ಪಟೇಲ್(9) ಹಾಗೂ ಹೆಟ್ಮೆಯರ್(15) ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೆಟ್ಮೆಯರ್ ಔಟಾದಾಗ ಡೆಲ್ಲಿಯ ಸ್ಕೋರ್ 6 ವಿಕೆಟ್ ನಷ್ಟಕ್ಕೆ 93 ರನ್. ಆಗ ಜೊತೆಯಾದ ಶ್ರೇಯಸ್(ಔಟಾಗದೆ 33, 33 ಎಸೆತ) ಹಾಗೂ ಅಶ್ವಿನ್(ಔಟಾಗದೆ 20,21 ಎಸೆತ) ತಾಳ್ಮೆಯ ಇನಿಂಗ್ಸ್ ಮೂಲಕ 5 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದರು.