ಋತುರಾಜ್ ಗಾಯಕ್ವಾಡ್ ಶತಕ, ರಾಜಸ್ಥಾನಕ್ಕೆ 190 ರನ್ ಗುರಿ ನೀಡಿದ ಚೆನ್ನೈ
ಅಬುಧಾಬಿ, ಅ.2: ಉತ್ತಮ ಫಾರ್ಮ್‌ನಲ್ಲಿರುವ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಅವರ ಆಕರ್ಷಕ ಶತಕದ (ಔಟಾಗದೆ 101, 60 ಎಸೆತ, 9 ಬೌಂಡರಿ, 5 ಸಿಕ್ಸರ್) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ ಗೆಲುವಿಗೆ 190 ರನ್ ಗುರಿ ನಿಗದಿಪಡಿಸಿದೆ.
ಶನಿವಾರ ನಡೆದ ಐಪಿಎಲ್ ಟೂರ್ನಿಯ 47ನೇ ಪಂದ್ಯದಲ್ಲಿ ಟಾಸ್ ಜಯಿಸಿದ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಚೆನ್ನೈ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದರು.
ಚೆನ್ನೈ ತಂಡ ಗಾಯಕ್ವಾಡ್ ಶತಕದ ಬಲದಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಗಾಯಕ್ವಾಡ್ ಕೊನೆಯ 30 ಎಸೆತಗಳಲ್ಲಿ 70 ರನ್ ಗಳಿಸಿದರು. ಕೊನೆಯ ಓವರ್‌ನ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಗಾಯಕ್ವಾಡ್ ಟ್ವೆಂಟಿ-20ಯಲ್ಲಿ ಚೊಚ್ಚಲ ಶತಕ ಪೂರೈಸಿದರು. ಚೆನ್ನೈ ಮುಸ್ತಫಿಝರ್ ಎಸೆದ ಕೊನೆಯ ಓವರ್ ವೊಂದರಲ್ಲೇ 22 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ಗಾಯಕ್ವಾಡ್ ಹಾಗೂ ಎಫ್ ಡು ಪ್ಲೆಸಿಸ್ 6.5 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 47 ರನ್ ಸೇರಿಸಿ ಸಾಧಾರಣ ಆರಂಭ ನೀಡಿದರು. ಈ ಇಬ್ಬರು ಬೇರ್ಪಟ್ಟ ಬಳಿಕ ಬ್ಯಾಟಿಂಗ್‌ಗೆ ಇಳಿದ ಸುರೇಶ್ ರೈನಾ(3), ಮೊಯಿನ್ ಅಲಿ(21) ಹಾಗೂ ಅಂಬಟಿ ರಾಯುಡು(2) ನಿರೀಕ್ಷಿತ ಪ್ರದರ್ಶನ ನೀಡದೇ ಬೇಗನೆ ವಿಕೆಟ್ ಕೈಚೆಲ್ಲಿದರು.
ಆದರೆ ಮತ್ತೊಂದೆಡೆ ಕ್ರೀಸ್‌ಗೆ ಅಂಟಿಕೊಂಡಿದ್ದ ಗಾಯಕ್ವಾಡ್ ಆಲ್‌ರೌಂಡರ್ ರವೀಂದ್ರ ಜಡೇಜ(ಔಟಾಗದೆ 32, 15 ಎಸೆತ, 4 ಬೌಂಡರಿ, 1 ಸಿಕ್ಸರ್)ಅವರೊಂದಿಗೆ 5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 55 ರನ್ ಗಳಿಸಿ ತಂಡ ಉತ್ತಮ ಸ್ಕೋರ್ ಗಳಿಸಲು ನೆರವಾದರು.