ಕೋವಿಡ್ ಗ್ರೀನ್ ಪಾಸ್ ನಿಯಮ ಬಿಗಿಗೊಳಿಸಿದ ಇಸ್ರೇಲ್

Update: 2021-10-03 17:38 GMT

ಜೆರುಸಲೇಂ, ಅ.3: ಕೋವಿಡ್ ಗ್ರೀನ್ಪಾಸ್ ನಿಯಮವನ್ನು ರವಿವಾರ ಬಿಗಿಗೊಳಿಸಿರುವ ಇಸ್ರೇಲ್, ಪ್ರತಿರೋಧ ಶಕ್ತಿ ವರ್ಧಕ ಲಸಿಕೆಯ ಡೋಸ್ ಪಡೆದಿರುವವರು ಅಥವಾ ಕೊರೋನ ಸೋಂಕಿನಿಂದ ಇತ್ತೀಚೆಗೆ ಚೇತರಿಸಿಕೊಂಡವರು ಮಾತ್ರ ಒಳಾಂಗಣ ಸ್ಥಳಗಳಿಗೆ ಪ್ರವೇಶಿಸಲು ಅವಕಾಶವಿದೆ ಎಂದಿದೆ. ಇಸ್ರೇಲ್ನ ಆರೋಗ್ಯ ಸಚಿವಾಲಯ ನೀಡುತ್ತಿರುವ ಗ್ರೀನ್ಪಾಸ್(ಡಿಜಿಟಲ್ ಲಸಿಕೆ ಪಾಸ್ಪೋರ್ಟ್ನ ರೀತಿಯ ದಾಖಲೆ) ಪಡೆಯಲು ಮಿಲಿಯಾಂತರ ಜನತೆ ಮುಗಿಬಿದ್ದ ಕಾರಣ ತಾಂತ್ರಿಕ ಅಡಚಣೆಯುಂಟಾಗಿತ್ತು. ಗ್ರೀನ್ಪಾಸ್ ಪಡೆದವರು ಅಂಗಡಿ, ರೆಸ್ಟಾರೆಂಟ್, ಸಾಂಸ್ಕತಿಕ ಕಾರ್ಯಕ್ರಮ, ಜಿಮ್ ಮತ್ತಿತರ ಒಳಾಂಗಣ ಸ್ಥಳಗಳಿಗೆ ಭೇಟಿ ನೀಡಲು ಅವಕಾಶವಿದೆ.


ರವಿವಾರ ಜಾರಿಗೊಳಿಸಿದ ನೂತನ ಮಾರ್ಗಸೂಚಿ ಪ್ರಕಾರ, ಪ್ರತಿರೋಧಕ ಶಕ್ತಿ ವರ್ಧಕ ಲಸಿಕೆ ಪಡೆದವರಿಗೆ ಮಾತ್ರ ಗ್ರೀನ್ ಪಾಸ್ ಲಭಿಸುತ್ತದೆ( ಕೊರೋನ ಸೋಂಕಿನ ಎರಡೂ ಲಸಿಕೆ ಪಡೆದವರಿಗೆ 8 ತಿಂಗಳ ಬಳಿಕ ನೀಡುವ ಲಸಿಕೆ) . 2 ಡೋಸ್ ಲಸಿಕೆ ಪಡೆದವರು ಅಥವಾ ಕೊರೋನ ಸೋಂಕಿನಿಂದ ಚೇತರಿಸಿಕೊಂಡವರಿಗೆ ಲಭಿಸುವ ಗ್ರೀನ್ಪಾಸ್ನ ಮಾನ್ಯತೆ 6 ತಿಂಗಳು ಮಾತ್ರ. ಈ ಹೊಸ ಮಾರ್ಗಸೂಚಿಯಿಂದ ಸುಮಾರು 2 ಮಿಲಿಯನ್ ಜನತೆ ತಮ್ಮ ಗ್ರೀನ್ಪಾಸ್ ಕಳೆದುಕೊಳ್ಳಲಿದ್ದಾರೆ.


ಗ್ರೀನ್ಪಾಸ್ ವ್ಯವಸ್ಥೆಯನ್ನು ವಿರೋಧಿಸಿ ನೂರಾರು ಜನತೆ ಪ್ರತಿಭಟನೆ ನಡೆಸಿದ್ದರಿಂದ ರವಿವಾರ ಇಸ್ರೇಲ್ನ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜ್ಯಾಂ ಉಂಟಾಗಿತ್ತು. ಸರಕಾರ ಈ ಆದೇಶದ ಮೂಲಕ ಲಸಿಕೆ ಪಡೆಯಲು ಬಲವಂತಗೊಳಿಸುತ್ತಿದೆ . ನಮ್ಮ ಮಕ್ಕಳು ಅಥವಾ ಮೊಮ್ಮಕ್ಕಳಿಗೆ ನಮ್ಮ ಅಸಮ್ಮತಿಯ ನಡುವೆಯೂ ಲಸಿಕೆ ಅಥವಾ ಔಷಧ ಪಡೆಯಲು ಬಲವಂತಗೊಳಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇಸ್ರೇಲ್ ನ 9.3 ಜನಸಂಖ್ಯೆಯಲ್ಲಿ 60%ಕ್ಕೂ ಅಧಿಕ ಜನತೆ ಪೈಝರ್/ಬಯೊಎನ್ಟೆಕ್ನ 2 ಡೋಸ್ ಲಸಿಕೆ ಪಡೆದಿದ್ದರೆ, ಸುಮಾರು 3.5 ಮಿಲಿಯನ್ ಜನತೆ ಪ್ರತಿರೋಧ ಶಕ್ತಿವರ್ಧಕ ಲಸಿಕೆ ಪಡೆದಿದ್ದಾರೆ. ಆದರೆ 2 ಮಿಲಿಯನ್ಗೂ ಹೆಚ್ಚು ಜನ ಕೇವಲ 2 ಡೋಸ್ ಲಸಿಕೆ ಮಾತ್ರ ಪಡೆದಿದ್ದು ಗ್ರೀನ್ಪಾಸ್ ಮಾನ್ಯತೆ ಕಳೆದುಕೊಳ್ಳಲಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News